ಪ್ರತಿಯೊಬ್ಬರೂ ಧರ್ಮ, ದಾನ ಕಾರ್ಯ ಮಾಡಿ

11-lxmr-1 nonavinkere shree
Published on

ಲಕ್ಷ್ಮೇಶ್ವರ: ಧರ್ಮೋ ರಕ್ಷತಿ ರಕ್ಷಿತಃ ಎಂಬ ವೇದವಾಣಿ ಸೂರ್ಯಚಂದ್ರರಷ್ಟೇ ಸತ್ಯ. ಪ್ರತಿಯೊಬ್ಬರೂ ಬದುಕಿನುದ್ದಕ್ಕೂ ದೇವರು, ಧರ್ಮ ಕಾರ್ಯ, ದಾನ, ದಯೆ- ಮಾನವೀಯತೆ ರೂಢಿಸಿಕೊಳ್ಳಬೇಕು ಎಂದು ನೊಣವಿನಕೆರೆ ಶ್ರೀ ಕಾಡಸಿದ್ದೇಶ್ವರಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಹೇಳಿದರು.
ಸಮೀಪದ ಗುಲಗಂಜಿಕೊಪ್ಪ ಗ್ರಾಮ ವ್ಯಾಪ್ತಿಯ ಶ್ರೀ ದುಂಡಿಬಸವೇಶ್ವರ ಜಾತ್ರಾ ಮಹೋತ್ಸವ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.
ಜನರು ಧರ್ಮ, ಸಂಸ್ಕೃತಿ, ಆಚರಣೆ, ಸ್ನೇಹ-ಪ್ರೀತಿಯ ಮೌಲ್ಯಗಳಡಿ ಬದುಕು ನಡೆಸುವಂತಾಗಲು ಜಾತ್ರಾ ಮಹೋತ್ಸವ, ಧರ್ಮ ಸಭೆಗಳು ವೇದಿಕೆಯಾಗಿವೆ. ಗುರು-ಹಿರಿಯರು ತೋರಿದ ಸನ್ಮಾರ್ಗ, ಸಂಪ್ರದಾಯಗಳನ್ನು ಎಂದಿಗೂ ಮರೆಯಬಾರದು ಎಂದರು.
ಜಾತ್ರೆಗಳು ಜಾತಿ, ಧರ್ಮಗಳ ಎಲ್ಲೆ ಮೀರಿ ಪರಸ್ಪರಲ್ಲಿ ಬಾಂಧವ್ಯ, ಸೌಹಾರ್ದ, ಸ್ನೇಹ ಬೆಸೆಯುವ ಕೊಂಡಿಯಾಗಿ ಕಾರ್ಯನಿರ್ವಹಿಸುತ್ತವೆ. ಜಾತ್ರಾ ಮಹೋತ್ಸವದಲ್ಲಿ ಲೋಕ ಕಲ್ಯಾಣಕ್ಕಾಗಿ ಹೋಮ-ಹವನ, ರಕ್ತದಾನ ಶಿಬಿರ, ಸಂಗೀತ, ಪ್ರಸಾದ ಸೇವೆ, ಧರ್ಮಗುರುಗಳಿಂದ ಧರ್ಮ ಸಂದೇಶ ನೀಡುವಂತಹ ಸಮಾಜಮುಖಿ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ. ಮುಕ್ತಿಮಂದಿರದಲ್ಲಿ ಸೆ. 13ರಂದು ನಡೆಯಲಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಎಲ್ಲ ಭಕ್ತರೂ ಪಾಲ್ಗೊಳ್ಳಿ. ಪತ್ರಿವರ್ಷ ಶ್ರಾವಣ ಮಾಸದಲ್ಲಿ ನಡೆಯುವ ದುಂಡಿಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಬರುವ ವರ್ಷಗಳಲ್ಲಿ ರಥೋತ್ಸವ ನಡೆಸೋಣ, ಅದಕ್ಕೆ ಭಕ್ತರ ಸಹಾಯ-ಸಹಕಾರ ಅಗತ್ಯ ಎಂದರು. ತಕ್ಷಣವೇ ಮುಕ್ತಿಮಂದಿರ, ಲಕ್ಷ್ಮೇಶ್ವರದ ಶ್ರೀ ಮಳೆಮಲ್ಲಿಕಾರ್ಜುನ ಸ್ವಾಮೀಜಿ ಮತ್ತು ಭಕ್ತರು ತಮ್ಮ ಭಕ್ತಿ ಸೇವೆ ಸಮರ್ಪಿಸಿದರು.
ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮತ್ತು ಗಂಜಿಗಟ್ಟಿಯ ವೈಜನಾಥ ಶಿವಲಿಂಗೇಶ್ವರ ಶಿವಾಚಾರ್ಯ ಮಹಾಸ್ವಾಮೀಜಿ ಮಾತನಾಡಿ, ಜಾತ್ರಾ ಮಹೋತ್ಸವ, ಧರ್ಮ ಕಾರ್ಯ, ಧರ್ಮಾಚರಣೆ ನಮ್ಮನ್ನು ಸನ್ಮಾರ್ಗದತ್ತ ಸಾಗಿಸಿ, ಶಾಂತಿ, ನೆಮ್ಮದಿ, ಸಮೃದ್ಧಿ ಕೊಡುತ್ತವೆ. ಶ್ರೀ ದುಂಡಿಬಸವೇಶ್ವರ ದೇವಸ್ಥಾನದಲ್ಲಿ ಧರ್ಮ, ಶಿಕ್ಷಣ, ಸಂಸ್ಕಾರ ಮತ್ತು ಸಮಾಜ ಸೇವಾ ಕೇಂದ್ರ ಸ್ಥಾಪಿಸುವ ಉದ್ದೇಶ ಸಮಿತಿಯವರಿಗಿದೆ. ಈ ಪವಿತ್ರ ಕಾರ್ಯಕ್ಕೆ ಭಕ್ತರು ಸಹಾಯ- ಸಹಕಾರ ನೀಡಬೇಕು ಎಂದರು. ಹೂವಿನಶಿಗ್ಲಿಯ ಚನ್ನವೀರ ಸ್ವಾಮೀಜಿ, ಕರೇವಾಡಿಮಠದ ಮಳೆಮಲ್ಲಿಕಾರ್ಜುನ ಶ್ರೀಗಳು ಮಾತನಾಡಿದರು.
ಮಾಜಿ ಸಂಸದ ಮಂಜುನಾಥ ಕುನ್ನೂರ, ಶಾಸಕ ಡಾ. ಚಂದ್ರು ಲಮಾಣಿ, ಗೌರಮ್ಮ ಬಡ್ನಿ, ಮಂಜನಗೌಡ ಕೆಂಚನಗೌಡ್ರ, ನಿರ್ಮಲಾ ತಳವಾರ, ಕರಿಯಪ್ಪಗೌಡ ಹೊಸಗೌಡ್ರ, ಪದ್ಮರಾಜ ಪಾಟೀಲ, ಸುಶೀಲವ್ವ ಮರಿಲಿಂಗನಗೌಡ್ರ, ಸುಧಾ ಮಾದರ, ನಾಗರತ್ನ ಕಡಾರಿ, ಈರಣ್ಣ ಅಂಕಲಕೋಟಿ, ಬಸವರಾಜ ಬೆಂಡಿಗೇರಿ, ದೇವಸ್ಥಾನ ಸಮಿತಿ ಸದಸ್ಯರು, ಹಿರಿಯರು ಇದ್ದರು.
ಜಾತ್ರಾ ಮಹೋತ್ಸವ ಅಂಗವಾಗಿ ರಕ್ತದಾನ ಶಿಬಿರ, ಸಂಗೀತ ಕಾರ್ಯಕ್ರಮ, ಸೇವಾಕರ್ತರು, ದಾನಿಗಳನ್ನು ಸನ್ಮಾನಿಸಲಾಯಿತು. ದೇವಸ್ಥಾನ ಕಮಿಟಿ ಅಧ್ಯಕ್ಷ ಬಸವರಾಜ ಕೊಟಗಿ, ರತ್ನಾ ಕುಂಬಾರ, ನಿಂಗಪ್ಪ ಶಿವಬಸಣ್ಣವರ, ಶಿವಪ್ಪ ಕಟಗಿ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net