ದಾನ, ಧರ್ಮದಿಂದ ಬದುಕು ಸಾರ್ಥಕ

10-LXR -1 GANJIGATTI SHREE SANMANA
Published on

ಲಕ್ಷ್ಮೇಶ್ವರ: ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮ ಕೈಲಾದಷ್ಟು ಅಳಿಲು ಸೇವೆ ಸಲ್ಲಿಸುವ ಮೂಲಕ ಬದುಕನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎಂದು ನೊಣವಿನಕೆರೆ ಕಾಡಸಿದ್ಧೇಶ್ವರಮಠದ ಡಾ. ಕರಿವೃಷಭದೇಶಿಕೇಂದ್ರ ಶಿವಯೋಗೀಶ್ವರ ಶ್ರೀಗಳು ಹೇಳಿದರು.
ರಾಮಗಿರಿ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಗೌರವ ಡಾಕ್ಟರೇಟ್ ಪುರಸ್ಕೃತ ಗಂಜಿಗಟ್ಟಿಯ ಡಾ. ವೈಜನಾಥ ಶಿವಲಿಂಗ ಶ್ರೀಗಳ ತುಲಾಭಾರ ಹಾಗೂ ಹರ ಗುರು ಚರಮೂರ್ತಿಗಳಿಗೆ ಸನ್ಮಾನ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಅವರು ಆಶೀರ್ವಚನ ನೀಡಿದರು. ‘ಜನನ ಆಕಸ್ಮಿಕ. ಸಾವು ನಿಶ್ಚಿತ. ಇವುಗಳ ನಡುವಿನ ಜೀವನದಲ್ಲಿ ಬದುಕಿನ ಸಾರ್ಥಕತೆಗಾಗಿ ಸಮಾಜ ಸೇವೆ, ದಾನ, ಧರ್ಮದ ಕಾರ್ಯ ಮಾಡಬೇಕು. ಬದುಕಿನ ಶಾಂತಿ, ನೆಮ್ಮದಿ, ಸಂಪತ್ತು, ಜ್ಞಾನ ಹೊಂದಲು ಗುರುವಿನ ಶ್ರೀರಕ್ಷೆ ಅವಶ್ಯ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಶಾಂತಿ, ನೆಮ್ಮದಿಯ ಬದುಕಿಗೆ ಗುರುಗಳ ಕೃಪಾಕಾರುಣ್ಯ ಅಗತ್ಯ. 3 ತಲೆಮಾರುಗಳಿಂದ ರಾಮಗಿರಿ ಗ್ರಾಮಸ್ಥರು ಗಂಜಿಗಟ್ಟಿ ಶ್ರೀಗಳ ಮೇಲಿಟ್ಟಿರುವ ಭಕ್ತಿ ಶ್ಲಾಘನೀಯ. ಸೆ. 13ರಂದು ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ನಡೆಯಲಿರುವ ತ್ರಿಕೋಟಿ ಶಿವಲಿಂಗ ಸ್ಥಾಪನೆಯ ಭೂಮಿಪೂಜೆಯ ಮಹೋನ್ನತ ಕಾರ್ಯದಲ್ಲಿ ಭಕ್ತರು ಪಾಲ್ಗೊಳ್ಳಬೇಕು ಎಂದರು.
ಆಶೀರ್ವಚನ ನೀಡಿದ ಡಾ. ವೈಜನಾಥ ಶಿವಲಿಂಗ ಶಿವಾಚಾರ್ರು, ರಾಮಗಿರಿ ಗ್ರಾಮ ನನ್ನ ತವರು ಮನೆಯಂತಿದೆ. ಭಕ್ತರು ಗಂಜಿಗಟ್ಟಿಮಠದ ಎಲ್ಲ ಸೇವಾ ಕಾರ್ಯಗಳನ್ನು ಕಾಯಾ ವಾಚಾ ಮನಸಾಪೂರ್ವಕವಾಗಿ ಮಾಡಿರುವುದು ಪರಮಾನಂದ ತಂದಿದೆ ಎಂದರು.
ಮೈಸೂರು, ಬನ್ನಿಕೊಪ್ಪ ಜಪದಕಟ್ಟೆಮಠದ ಶ್ರೀ ಸುಜ್ಞಾನದೇವ ಶಿವಾಚಾರ್ಯರು, ಮಸ್ಟೂರಿನ ರುದ್ರಮುನಿ ಶಿವಾಚಾರ್ಯರು, ಹೂವಿನನಶಿಗ್ಲಿ ವಿರಕ್ತಮಠದ ಶ್ರೀ ಚನ್ನವೀರ ಶ್ರೀಗಳು, ಬೆಳ್ಳಟ್ಟಿ ರಾಮಲಿಂಗೇಶ್ವರಮಠದ ಶ್ರೀ ಬಸವರಾಜ ಶ್ರೀಗಳು, ಜಿ.ಎಸ್ ಗಡ್ಡದೇವರಮಠ ಮಾತನಾಡಿದರು. ಶಿಕ್ಷಕಿ ಮೈತ್ರಾದೇವಿ ಹಿರೇಮಠ, ಎಸ್.ಐ. ಬೆಟಗೇರಿ, ಬಸವರಾಜ ಬೆಳಗಲಿ, ಈರಯ್ಯ ಹಿರೇಮಠ, ವಿಜಯಲಕ್ಷ್ಮೀ ಪಾಟೀಲ, ಸಾವಿತ್ರಿ ಪೂಜಾರ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net