

ಲಕ್ಷೆ್ಮೕಶ್ವರ: ಗ್ರಾಮೀಣ ದಸರಾ ಕ್ರೀಡಾಕೂಟಗಳು ಗ್ರಾಮೀಣ ಕ್ರೀಡೆಗಳನ್ನು ಉತ್ತೇಜಿಸುತ್ತವೆ. ಇಲ್ಲಿ ಗ್ರಾಮೀಣ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಆದರೆ, ಕ್ರೀಡಾ ಇಲಾಖೆ ಅಧಿಕಾರಿಗಳು ಹೆಚ್ಚಿನ ಪ್ರಚಾರ ಮತ್ತು ಮಾಹಿತಿ ನೀಡದ್ದರಿಂದ ಕಡಿಮೆ ಜನ ಭಾಗವಹಿಸಿದ್ದಾರೆ ಎಂದು ಶಾಸಕ ಡಾ. ಚಂದ್ರು ಲಮಾಣಿ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ಉಮಾ ವಿದ್ಯಾಲಯ ಮೈದಾನದಲ್ಲಿ ಯುವ ಸಬಲೀಕರಣ, ಕ್ರೀಡಾ ಇಲಾಖೆ ಮತ್ತು ತಾಪಂ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ 2025-26ನೇ ಸಾಲಿನ ತಾಲೂಕು ಮಟ್ಟದ ದಸರಾ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಮುಂದಿನ ದಿನಗಳಲ್ಲಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಆಯೋಜಕರನ್ನು ಶಾಸಕರು ತರಾಟೆ ತೆಗೆದುಕೊಂಡರು. ಪೂರ್ವ ಸಿದ್ಧತೆ ಇಲ್ಲದೆ ಗೊಂದಲದ ಗೂಡಾದ ದಸರಾ ಕ್ರೀಡಾಕೂಟದ ಉದ್ಘಾಟನೆ ಕಾರ್ಯಕ್ರಮ ಕೇವಲ 10 ನಿಮಿಷದಲ್ಲಿ ಮುಗಿಯಿತು. ನಂತರ ಪ್ರೌಢಶಾಲಾ ವಿದ್ಯಾರ್ಥಿಗಳಿಂದ ಕ್ರೀಡಾಕೂಟಕ್ಕೆ ಕೊಂಚ ಮೆರುಗು ಬಂದಿತು. ಆ. 16ರಂದೇ ನಡೆಯಬೇಕಿದ್ದ ಕ್ರೀಡಾಕೂಟ ಮಳೆ, ಇತರ ಕಾರಣದಿಂದ ಮುಂದೂಡಲ್ಪಟ್ಟಿತ್ತು.
ಹೊಡೆದಾಡಿಕೊಂಡ ಕ್ರೀಡಾಪಟುಗಳು: ಬಟ್ಟೂರ ಮತ್ತು ಬಾಲೆಹೊಸೂರ ಗ್ರಾಮಗಳ ಕ್ರೀಡಾಪಟುಗಳು ಖೋಖೋ ಪಂದ್ಯಾವಳಿಯ ವೇಳೆ ಪರಸ್ಪರ ಕೈಕೈ ಮಿಲಾಯಿಸಿದ್ದಾರೆ. ಆಟಕ್ಕೆ ಬಳಸುವ ಸಾಮಗ್ರಿ ಬಳಸಿ ಹೊಡೆದಾಡಿ ಗಾಯಗೊಂಡಿದ್ದಾರೆ. ಸ್ಥಳದಲ್ಲಿದ್ದ ಇಬ್ಬರು ಪೊಲೀಸರಿಂದ ಪರಿಸ್ಥಿತಿ ನಿಯಂತ್ರಿಸಲಾಗದಷ್ಟು ವಿಕೋಪಕ್ಕೆ ತಿರುಗಿತು. ಇದನ್ನು ನೋಡಿ ಶಾಲಾ ಮಕ್ಕಳು ಬೆಚ್ಚಿಬಿದ್ದಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ನಾಗರಾಜ ಗಡಾದ ಲಾಠಿ ರುಚಿ ತೋರಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.
ತಾಪಂ ಇಒ ಕೃಷ್ಣಪ್ಪ ಧರ್ಮರ ಮತ್ತು ತಾಲೂಕು ಯುವಜನ ಸೇವಾ ಕ್ರೀಡಾಧಿಕಾರಿ ಸಿ.ವೈ. ಮೇಗಲಮನಿ ಕ್ರೀಡಾಕೂಟ ಸ್ಥಗಿತಗೊಳಿಸಿ ಮುಂದೂಡಿದರು. ಕ್ರೀಡಾಕೂಟದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಕೆಲ ಕ್ರೀಡಾಪಟುಗಳು ಹೊಡೆದಾಡಿದ್ದಾರೆ. ಈ ವೇಳೆ ಶಾಲಾ ಮಕ್ಕಳಿಗೆ ಏನಾದರೂ ತೊಂದರೆಯಾಗಿದ್ದರೆ ಯಾರು ಹೊಣೆ ಎಂದು ಪಾಲಕರಾದ ಮಲ್ಲಿಕಾರ್ಜುನ ದೊಡ್ಡಮನಿ ಅವ್ಯವಸ್ಥೆಯ ವಿರುದ್ಧ ಹರಿಹಾಯ್ದರು. ಆರ್.ಎಸ್. ನರೇಗಲ್ಲ, ಆನಂದ ಮುಳಗುಂದ, ಇತರರಿದ್ದರು.