ಗಗನಕ್ಕೇರಿದ ಹಣ್ಣಿನ ರಾಜನ ಬೆಲೆ

mango
Published on

ಲಕ್ಷೆ್ಮೕಶ್ವರ: ಮಾವಿನ ಹಣ್ಣೆಂದರೆ ಎಲ್ಲರಿಗೂ ಇಷ್ಟ. ಆದರೆ, ಹಣ್ಣುಗಳ ರಾಜನ ಬೆಲೆ ಮಾತ್ರ ಗಗನಕ್ಕೇರಿದೆ. ಬೆಲೆ ಕೇಳಿದರೆ ಎಂಥವರೂ ಖರೀದಿಗೆ ಹಿಂದಡಿ ಇಡಬೇಕು ಎನ್ನುವಷ್ಟರ ಮಟ್ಟಿಗೆ ಕಹಿ ಅನುಭವವಾಗುತ್ತಿದೆ. ಹವಾಮಾನ ವೈಪರೀತ್ಯ, ಅಕಾಲಿಕ ಮಳೆ, ರೋಗದ ಕಾಟ ಸೇರಿ ಅನೇಕ ಕಾರಣದಿಂದ ಇಳುವರಿ ಕಡಿಮೆಯಾಗಿದೆ. ಈ ವರ್ಷ ಮಾರುಕಟ್ಟೆಗೆ ಮಾವಿನ ಹಣ್ಣಿನ (ಹಣ್ಣುಗಳ ರಾಜನ) ಆಗಮನವೂ ತಡವಾಗಿದೆ. ಮಾರ್ಚ್/ಏಪ್ರಿಲ್​ನಲ್ಲಿ ಆರಂಭವಾಗುವ ಮಾವಿನ ಹಣ್ಣಿನ ವ್ಯಾಪಾರ ಏಪ್ರಿಲ್ ಎರಡು ವಾರ ಕಳೆದರೂ ಹಣ್ಣಿಗಾಗಿ ಹುಡುಕಾಡುವ ಸ್ಥಿತಿಯಿದೆ. ಬೆಲೆಯಲ್ಲೂ ಭಾರಿ ಏರಿಕೆಯಾಗಿದೆ. ಸದ್ಯಕ್ಕಂತೂ ಮಾವಿನ ಸಹವಾಸಕ್ಕೆ ಹೋಗುವುದೇ ಬೇಡ ಎಂಬ ಮುಂದಾಲೋಚನೆ ಎಲ್ಲರದಾಗಿದೆ. ಸದ್ಯ ಕಲ್ಮಿ, ಬೇನಿಶಾ, ಸಿಂಧೂರಿ, ರಸಪೂರಿ ಸೇರಿದಂತೆ ಹಲವು ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆಪೂಸ್, ತೋತಾಪುರಿ, ಬದಾಮಿ, ಮಲ್ಲಿಕಾ, ನೀಲಂ, ಜವಾರಿ ತಳಿಗಳ ಹಣ್ಣುಗಳು ಎರಡ್ಮೂರು ವಾರಗಳಲ್ಲಿ ಮಾರುಕಟ್ಟೆ ಪ್ರವೇಶಿಸಲಿವೆ. ಪ್ರತಿ ಕೆಜಿ ಮಾವಿನ ಹಣ್ಣಿನ ಬೆಲೆ 200ರಿಂದ 300 ರೂ. ವರೆಗಿದ್ದು, ಡಜನ್ ಹಣ್ಣಿಗೆ 600ರಿಂದ 800 ರೂ.ಗಳಷ್ಟಾಗಿದೆ. ಇದರಿಂದ ಬಡವರ ಬಾಯಿಗೆ ಕಹಿ ಆಗಲಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಯುಗಾದಿ ಪ್ರಾರಂಭದೊಂದಿಗೆ ಗೃಹ ಪ್ರವೇಶ, ಸೀಮಂತ ಸೇರಿ ಇತರ ವಿಶೇಷ ಕಾರ್ಯಕ್ರಮ, ಬೀಗರೂಟಕ್ಕೆ ಮಾವಿನ ಶೀಕರಣೆ ಮಾಡಲಾಗುತ್ತದೆ. ರಂಜಾನ್, ದವನದ ಹುಣ್ಣಿಮೆ ಮುಗಿದರೂ ಸದ್ಯ ಮಾರುಕಟ್ಟೆಯಲ್ಲಿ ಹಣ್ಣಿನ ಪ್ರಮಾಣ ಕಡಿಮೆ ಇದೆ. ಇದರಿಂದಾಗಿ ಗ್ರಾಹಕರು, ಮಾವು ಪ್ರಿಯರೂ ಮಾವು ಖರೀದಿಗೆ ಹಿಂದೇಟು ಹಾಕುತ್ತಿದ್ದಾರೆ. ಸ್ಥಳೀಯ ಮಾವು ಬೆಳೆಗಾರರು ಬೆಳೆ ನಷ್ಟ ಅನುಭವಿಸಿದ್ದಾರೆ. ಅಳಿದುಳಿದ ಬೆಳೆ ಉಳಿಸಿ ನೈಸರ್ಗಿಕವಾಗಿ ಹಣ್ಣು ಮಾಗಿಸಲು ಸ್ಥಳೀಯರು ಮುಂದಾಗಿದ್ದರಿಂದ ಮಾರುಕಟ್ಟೆಗೆ ಬರಲು ಇನ್ನಷ್ಟು ತಡವಾಗುತ್ತದೆ. ಇನ್ನು ಲಕ್ಷಾಂತರ ರೂ. ಬಂಡವಾಳ ಹಾಕಿ ಹಣ್ಣು ಖರೀದಿಸಿ ವ್ಯಾಪಾರ ಮಾಡಲು ಮುಂದಾದರೂ ಬೆಲೆ ಏರಿಕೆಯಿಂದ ಖರೀದಿಸಿ ತಂದ ಹಣ್ಣು ಮಾರಾಟವಾಗುತ್ತಿಲ್ಲ ಎಂಬುದು ವ್ಯಾಪಾರಸ್ಥರ ಅಳಲಾಗಿದೆ. ಕಾಡಿದ ಅಕಾಲಿಕ ಮಳೆ, ರೋಗ ಅಕಾಲಿಕ ಮಳೆ, ರೋಗಬಾಧೆಯಿಂದ ಸಂಪೂರ್ಣ ಇಳುವರಿ ಕುಸಿದಿದ್ದರಿಂದ ಮಾವಿನ ಹಣ್ಣಿಗೆ ಬಂಗಾರದ ಬೆಲೆ ಬಂದಿದೆ. ಹೂವು ಬಿಟ್ಟ ವೇಳೆ ಮಳೆ, ಇಬ್ಬನಿ, ಬೂದುರೋಗ, ರಸಹೀರುವ ಕೀಟ, ಜಿಗಿ, ಚಿಬ್ಬುರೋಗದಿಂದ ಶೇ.30ರಷ್ಟು ಇಳುವರಿ ಮಾತ್ರ ಬರುವಂತಾಗಿದೆ. ಜಿಲ್ಲೆಯಲ್ಲಿ ಆಪೂಸ್, ಕೇಸರ, ದಶೇರಿ, ತೋತಾಪುರಿ, ಅಮ್ರಪಾಲಿ, ಮಲ್ಲಿಕಾ, ರತ್ನಗಿರಿ, ಬದಾಮಿ, ಮಲಗೋಬಾ ಬೆಳೆಯಲಾಗುತ್ತದೆ. ಲಕ್ಷೆ್ಮೕಶ್ವರ, ಸೂರಣಗಿ, ದೊಡ್ಡೂರ, ಉಂಡೇನಹಳ್ಳಿಯಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತಿದ್ದು, ಬೆಳಗಾವಿ, ಧಾರವಾಡ, ಉತ್ತರ ಕನ್ನಡ ಮೊದಲಾದ ಕಡೆಗಳಿಂದ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಬರುತ್ತಿವೆ.

ಗದಗ, ಶಿರಹಟ್ಟಿ, ಲಕ್ಷೆ್ಮೕಶ್ವರ, ರೋಣ, ಗಜೇಂದ್ರಗಡ, ಮುಂಡರಗಿ ತಾಲೂಕು ಸೇರಿ ಅಂದಾಜು 3,000 ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಇಳುವರಿ ಸಂಪೂರ್ಣ ಕುಸಿದಿದ್ದರಿಂದ ಸ್ಥಳೀಯ ಮಾರುಕಟ್ಟೆಯಲ್ಲೂ ಬೇಡಿಕೆ ಮತ್ತು ಬೆಲೆ ಹೆಚ್ಚಳವಾಗಿದೆ. | ಸುರೇಶ ಕುಂಬಾರ ನಿವೃತ್ತ ತೋಟಗಾರಿಕೆ, ಸಹಾಯಕ ನಿರ್ದೇಶಕ, ಲಕ್ಷೆ್ಮೕಶ್ವರ ಈ ವರ್ಷ ಉತ್ತಮ ಬೆಲೆ ಇದ್ದರೂ ಅಕಾಲಿಕ ಮಳೆ, ರೋಗದಿಂದ ಇಳುವರಿ ಇಲ್ಲದ್ದರಿಂದ ನಮ್ಮ ಹಣೆಬರಹವೇ ಇಷ್ಟು ಎಂದು ಬೆಳೆಗಾರರು ಕೈ ಕೈ ಹಿಸುಕಿಕೊಳ್ಳುವಂತಾಗಿದೆ. ಸರ್ಕಾರ ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಾರರಿಗೆ ಬೆಳೆ ಪರಿಹಾರ, ಸಹಾಯ ಧನ ಕಲ್ಪಿಸಬೇಕು.| ನಿಂಗಪ್ಪ ಪೂಜಾರ, ಮಾವು ಬೆಳೆಗಾರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net