

ಯಳಂದೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ತಾಲೂಕು ವಕೀಲರ ಸಂಘದ ವತಿಯಿಂದ ಶುಕ್ರವಾರ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ತಾಲೂಕು ವಕೀಲರ ಸಂಘದ ಅಧ್ಯಕ್ಷ ಹೊನ್ನೂರು ರಾಜಣ್ಣ ಮಾತನಾಡಿ, ವಕೀಲರ ಸಂರಕ್ಷಣೆ ಕಾಯ್ದೆ 2024 ರ ತಿದ್ದುಪಡಿ ಮಾಡಬೇಕು, ಅವೈಜ್ಞಾನಿಕ ಅಖಿಲ ಭಾರತ ಬಾರ್ ಪರೀಕ್ಷೆ ರದ್ದುಪಡಿಸಬೇಕು. ಕಿರಿಯ ವಕೀಲರಿಗೆ 2 ವರ್ಷಗಳ ಕಾಲ ಮಾಸಿಕ 10 ಸಾವಿರ ರೂ. ಸಹಾಯಧನ ನೀಡಬೇಕು, ಜಿಲ್ಲಾ ವಕೀಲರ ಸಂಘಕ್ಕೆ 10 ಲಕ್ಷ ರೂ. ಅನುದಾನ ಮಂಜೂರು ಮಾಡಬೇಕು. ವೈದ್ಯಕೀಯ ಮತ್ತು ಜೀವ ವಿಮಾ ಸೌಲಭ್ಯವನ್ನು ನೀಡಬೇಕು, ಜಿಲ್ಲಾ ನ್ಯಾಯಾಲಯಗಳ ಸಂಕೀರ್ಣಗಳಲ್ಲಿ ವಕೀಲರ ಅಕಾಡೆಮಿ ಸ್ಥಾಪಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಹೆಚ್ಚುವರಿ ನ್ಯಾಯಾಲಯಗಳನ್ನು ಸ್ಥಾಪಿಸಬೇಕು, ನ್ಯಾಯಾಲಯದಲ್ಲಿ ವಕೀಲರ ಚೇಂಬರ್‌ಗಳನ್ನು ಸ್ಥಾಪಿಸಬೇಕು, ವಕೀಲರಿಗೆ ಟೋಲ್ ಶುಲ್ಕ ರಹಿತ ಪ್ರಯಾಣಕ್ಕೆ ಅವಕಾಶ ನೀಡಬೇಕು, ರಾಜ್ಯ ವಕೀಲರ ಪರಿಷತ್ತಿನ ಕಚೇರಿಯನ್ನು ವಿಭಾಗೀಯ ಮಟ್ಟದಲ್ಲಿ ಸ್ಥಾಪಿಸಬೇಕು, ವಕೀಲರ ಸಂಘ, ಪರಿಷತ್ತಿನ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ನೀಡಬೇಕು, ಜಾತಿ ಆಧಾರದಲ್ಲಿ ಮೀಸಲಾತಿ ನೀಡುವುದೂ ಸೇರಿದಂತೆ ಒಂದು ತಿಂಗಳೊಳಗಾಗಿ ಬೇಡಿಕೆಗಳನ್ನು ಈಡೇರಿಸದಿದ್ದಲ್ಲಿ ನಮ್ಮ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮನವಿ ಪತ್ರವನ್ನು ತಹಸೀಲ್ದಾರ್ ಶಿವರಾಜು ಅವರಿಗೆ ಸಲ್ಲಿಸಲಾಯಿತು. ವಕೀಲರಾದ ಬಿ.ಎಂ. ಮಹದೇವಸ್ವಾಮಿ, ಸಿ.ಆರ್. ನಾಗರಾಜು, ಅಂಬಳೆ ಸಿದ್ದರಾಜು, ಕುಮಾರಸ್ವಾಮಿ, ಸಿ.ಎಂ. ಮಹದೇವಸ್ವಾಮಿ, ಶಶಿಧರ್, ರವೀಶ್, ಜಯಶಂಕರ್, ಕಾಂತರಾಜು, ಆಶ್ವಿನ್‌ಕುಮಾರ್, ಎಂ.ನಾಗರಾಜು ಇದ್ದರು.