ಮೈಸೂರಿನಲ್ಲಿ ವಕೀಲರ ಪ್ರತಿಭಟನೆ

mysore
Published on

ಮೈಸೂರು: ಚಿಕ್ಕಮಗಳೂರಿನಲ್ಲಿ ವಕೀಲರೊಬ್ಬರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಘಟನೆ ಖಂಡಿಸಿ ವಕೀಲರು ನಗರದಲ್ಲಿ ಪ್ರತಿಭಟನೆ ನಡೆಸಿದರು.


ಜಿಲ್ಲಾ ನ್ಯಾಯಾಲಯದ ಮುಂಭಾಗದ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ವಕೀಲರು, ಪೊಲೀಸರ ವಿರುದ್ಧ ಘೋಷಣೆ ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.


ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಮಾತನಾಡಿ, ಚಿಕ್ಕಮಗಳೂರಿನಲ್ಲಿ ನಡೆದ ಘಟನೆ ಖಂಡನೀಯ. ಇದನ್ನು ವಿರೋಧಿಸಿ ರಾಜ್ಯಾದಂತ ವಕೀಲರು ಪ್ರತಿಭಟನೆ ನಡೆಸಿದ್ದಾರೆ. ಈ ಹಿಂದೆಯೂ ಅನೇಕ ಸಂದರ್ಭಗಳಲ್ಲಿ ವಕೀಲರ ಮೇಲೆ ಪೊಲೀಸರಿಂದ ಹಲ್ಲೆ ಆಗಿದೆ. ಆದರೆ, ಚಿಕ್ಕಮಗಳೂರಿನ ಪೊಲೀಸರು ವಕೀಲರ ವಿರುದ್ಧ ತೊಡೆ ತಟ್ಟುವ ಮೂಲಕ ನ್ಯಾಯಾಲಯಕ್ಕೆ ಅವಮಾನ ಮಾಡಿದ್ದಾರೆ ಎಂದು ಕಿಡಿಕಾರಿದರು.


ನಾವು ಎಲ್ಲ ಪೊಲೀಸರನ್ನು ಕೆಟ್ಟವರೆಂದು ಹೇಳುತ್ತಿಲ್ಲ. ಆದರೆ, ಕೆಲವರಿಂದಾಗಿ ಇಡೀ ಪೊಲೀಸ್ ವ್ಯವಸ್ಥೆಗೆ ಕೆಟ್ಟ ಹೆಸರು ಬರುತ್ತಿದೆ. ಹೀಗಾಗಿ ಗೃಹ ಇಲಾಖೆ ಈ ಕೂಡಲೇ ಹಲ್ಲೆ ನಡೆಸಿರುವ ಪೊಲೀಸರ ವಿರುದ್ಧ ಸ್ವಯಂ ಪ್ರೇರಣೆಯಿಂದ ಪ್ರಕರಣ ದಾಖಲಿಸಿ ತಪ್ಪಿತಸ್ಥರಿಗೆ ಶಿಕ್ಷೆ ಕೊಡಿಸಬೇಕು. ಇಲ್ಲವಾದರೆ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.


ಸರ್ಕಾರ ಕೂಡಲೇ ವಕೀಲರ ಸಂರಕ್ಷಣೆ ಕಾಯ್ದೆ ಜಾರಿ ಮಾಡಬೇಕೆಂದು ಒತ್ತಾಯಿಸಿದರು.


ಸಂಘದ ಪದಾಧಿಕಾರಿಗಳಾದ ಉಮೇಶ್, ಪುಟ್ಟಸಿದ್ದೇಗೌಡ, ವಕೀಲರಾದ ಚಂದ್ರಮೌಳಿ, ಎನ್.ಪುನೀತ್, ಭಾಗ್ಯಮ್ಮ ಇನ್ನಿತರರಿದ್ದರು

ಬಿಗಿ ಬಂದೋಬಸ್ತ್:


ವಕೀಲರ ಪ್ರತಿಭಟನೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು. ಪ್ರತಿಭಟನಾ ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಬಿ.ರಮೇಶ್ ಭೇಟಿ ನೀಡಿ ಬಂದೋಬಸ್ತ್ ಬಗ್ಗೆ ನಿಗಾ ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net