ಮೈಸೂರಿನಲ್ಲಿ ಮುಂದುವರಿದ ವಕೀಲರ ಪ್ರತಿಭಟನೆ

13
Published on

ಮೈಸೂರು: ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗೆ ತರುವಂತೆ ವಕೀಲರು ನಗರದಲ್ಲಿ ಮಂಗಳವಾರವೂ ಪ್ರತಿಭಟನೆ ಮುಂದುವರಿಸಿದರು.
ನ್ಯಾಯಾಲಯದ ಕಲಾಪದಿಂದ ಹೊರಗುಳಿದು ಬೀದಿಗಿಳಿದಿರುವ ವಕೀಲರು ರಾಜ್ಯ ಸರ್ಕಾರ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿ ಮಾಡುವವರೆಗೂ ಹೋರಾಟ ಮುಂದುವರಿಸುವುದಾಗಿ ತಿಳಿಸಿದ್ದಾರೆ.

ಕಳೆದ ಹಲವು ದಿನಗಳಿಂದ ವಕೀಲರು ಪ್ರತಿಭಟಿಸುತ್ತಿದ್ದು, ರಾಜ್ಯ ಸರ್ಕಾರ ಕೇವಲ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಪ್ರಸ್ತಾವನೆ ಮಾಡಿ ಸುಮ್ಮನಾಗಿದೆ. ಇದು ಸರಿಯಲ್ಲ. ಈ ಕೂಡಲೇ ಮಸೂದೆಯನ್ನು ಅಂಗೀಕರಿಸಿ ಶ್ವೇತಪತ್ರ ಹೊರಡಿಸಬೇಕೆಂದು ವಕೀಲರು ಒತ್ತಾಯಿಸಿದರು.


ರಾಜ್ಯದಲ್ಲಿ ವಕೀಲರ ಮೇಲೆ ನಿರಂತರವಾಗಿ ಹಲ್ಲೆಗಳು ನಡೆಯುತ್ತಿದ್ದು, ರಕ್ಷಣೆ ಇಲ್ಲದಂತಾಗಿದೆ. ಚಿಕ್ಕಮಗಳೂರಿನಲ್ಲಿ ವಕೀಲರ ಮೇಲೆ ಪೊಲೀಸರು ಅಮಾನುಷವಾಗಿ ಹಲ್ಲೆ ನಡೆಸಿ ಅವಮಾನಿಸಿದ್ದಾರೆ. ಹಲ್ಲೆ ನಡೆಸಿದ ಪೊಲೀಸರನ್ನು ಸರ್ಕಾರ ಕೂಡಲೇ ಸೇವೆಯಿಂದ ವಜಾ ಮಾಡಬೇಕು. ಇದೀಗ ಕಲಬುರಗಿಯಲ್ಲಿ ವಕೀಲರ ಹತ್ಯೆಯಾಗಿದೆ. ಆದ್ದರಿಂದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ನಡೆದ ವಕೀಲರ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಅವರು ಭರವಸೆ ನೀಡಿದಂತೆ ಪ್ರಸಕ್ತ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಮಸೂದೆಗೆ ಅಂಗೀಕಾರ ಪಡೆದು ಕಾಯ್ದೆ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಮೈಸೂರು ವಕೀಲರ ಸಂಘದ ಅಧ್ಯಕ್ಷ ಎಂ.ಮಹದೇವಸ್ವಾಮಿ, ಸಂಘದ ಉಪಾಧ್ಯಕ್ಷ ಪುಟ್ಟಸಿದ್ದೇಗೌಡ, ಕಾರ್ಯದರ್ಶಿ ಎಸ್.ಉಮೇಶ್, ಖಜಾಂಚಿ ಎಚ್.ಎಸ್.ಮಹದೇವಸ್ವಾಮಿ, ಜಂಟಿ ಕಾರ್ಯದರ್ಶಿ ಜಿ.ಎಂ.ನಾಗೇಶ್, ಮಹಿಳಾ ಕಾರ್ಯದರ್ಶಿ ಬಿ.ಎಸ್.ಭಾಗ್ಯಮ್ಮ, ವಕೀಲರಾದ ಎನ್.ಪುನೀತ್, ಶಿವಣ್ಣ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net