

ಮೈಸೂರು: ಹಿಂದುಗಳ ಮೇಲೆ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದಾಳಿ ಖಂಡಿಸಿ ನಗರದಲ್ಲಿ ವಕೀಲರು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ನ್ಯಾಯಲಯದ ಮುಂಭಾಗದ ಗಾಂಧಿ ಪುತ್ಥಳಿ ಮುಂದೆ ಪ್ರತಿಭಟನೆ ನಡೆಸಿ, ಬಾಂಗ್ಲಾದಲ್ಲಿರುವ ಹಿಂದುಗಳ ರಕ್ಷಣೆ ಮಾಡುವ ಜತೆಗೆ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.
ಬಾಂಗ್ಲಾದೇಶದಲ್ಲಿ ಹಿಂಸಾಚಾರ ಬುಗಿಲೆದ್ದಿದ್ದು, ಹಿಂದುಗಳ ಮೇಲೆ ಮೂಲಭೂತವಾದಿಗಳು ಮಾಡುತ್ತಿರುವ ದೌರ್ಜನ್ಯ ಖಂಡನೀಯ. ಅಲ್ಲಿ ಅರಾಜಕತೆ ಉಂಟಾಗಿದ್ದು, ಹಿಂದುಗಳ ಮನೆ, ಅಂಗಡಿ, ದೇವಸ್ಥಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಅತ್ಯಾಚಾರ, ಹತ್ಯೆ, ಆಸ್ತಿನಾಶದಂತಹ ಅಮಾನವೀಯ ಕೃತ್ಯ ಎಸಗಲಾಗುತ್ತಿದೆ. ಸೇನೆಯೂ ಇದನ್ನು ತಡೆಯಲು ಸಾಧ್ಯವಾಗುತ್ತಿಲ್ಲ ಎಂದು ಕಿಡಿಕಾರಿದರು.
ಬಾಂಗ್ಲಾದಲ್ಲಿರುವ ಹಿಂದೂಗಳ ಜತೆಗೆ ನಾವಿದ್ದೇವೆ ಎಂಬ ನೈತಿಕ ಸ್ಥೈರ್ಯವನ್ನು ಭಾರತ ತುಂಬಬೇಕು. ಅವರ ರಕ್ಷಣೆಗೆ ಕೇಂದ್ರ ಸರ್ಕಾರ ಮುಂದಾಗಬೇಕು. ಅಲ್ಲದೆ ಬಾಂಗ್ಲಾದೇಶ ಸರ್ಕಾರ ಹಿಂದುಗಳ ಮೇಲಿನ ದಾಳಿ ತಡೆಯಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ವಕೀಲರ ಸಂಘದ ಅಧ್ಯಕ್ಷ ಲೋಕೇಶ್, ವಕೀಲ ಉಮೇಶ್, ಬಿ.ಶಿವಣ್ಣ, ಸಿ.ವಿ.ಕೇಶವಮೂರ್ತಿ, ಅರುಣಕುಮಾರಿ ಇತರರು ಇದ್ದರು.