

ಮಂಡ್ಯ: ಜಮೀನು ವ್ಯಾಜ್ಯ ಪ್ರಕರಣ ವಿಚಾರವಾಗಿ ಭೇಟಿ ಮಾಡಿ ಚರ್ಚಿಸಲು ಮುಂದಾದ ವಕೀಲ ಅಮಿತ್ ಎಂಬುವರೊಂದಿಗೆ ದರ್ಪ ಪ್ರದರ್ಶಿಸುವುದರ ಜತೆಗೆ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಪಾಂಡವಪುರ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರನ್ನು ಸೇವೆಯಿಂದ ಅಮಾನತು ಮಾಡುವಂತೆ ಒತ್ತಾಯಿಸಿ ವಕೀಲರು ಪ್ರತಿಭಟನೆ ನಡೆಸಿದರು.
ವಕೀಲರ ಸಂಘದ ನೇತೃತ್ವದಲ್ಲಿ ವಕೀಲರು ನ್ಯಾಯಾಲಯ ಕಲಾಪದಿಂದ ಹೊರಗುಳಿದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಪಾಂಡವಪುರ ಉಪ ವಿಭಾಗಾಧಿಕಾರಿ ದುರ್ವರ್ತನೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಕೆ.ಆರ್.ಪೇಟೆಯ ವಕೀಲ ಅಮಿತ್ ಎರಡು ದಿನದ ಹಿಂದೆ ಜಮೀನು ವ್ಯಾಜ್ಯ ಪ್ರಕರಣ ವಿಚಾರವಾಗಿ ಪಾಂಡವಪುರದ ಕಚೇರಿಯಲ್ಲಿ ಉಪ ವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರನ್ನು ಭೇಟಿಯಾಗಿ ಚರ್ಚೆ ಮಾಡುತ್ತಿದ್ದಾಗ ಸಮರ್ಪಕವಾಗಿ ಸ್ಪಂದಿಸಿಲ್ಲ. ಮಾತ್ರವಲ್ಲದೆ ಅಧಿಕಾರ ದುರ್ಬಳಕೆ ಮಾಡಿಕೊಂಡು ದರ್ಪದಿಂದ ವರ್ತಿಸಿ ಕನಿಷ್ಟ ಗೌರವವನ್ನು ನೀಡದೆ ಪೊಲೀಸರನ್ನು ಸ್ಥಳಕ್ಕೆ ಕರೆಯಿಸಿ ವಕೀಲನನ್ನು ವಶಕ್ಕೆ ನೀಡಲಾಗಿದೆ. ಇದಲ್ಲದೆ ವಕೀಲ ಅಮಿತ್ ಅವರನ್ನ ಪೊಲೀಸರು ಠಾಣೆಯಲ್ಲಿ ಸುಮಾರು ಮೂರು ತಾಸು ಕಾನೂನು ಬಾಹಿರವಾಗಿ ಬಂಧನದಲ್ಲಿ ಇರಿಸಿ ದೌರ್ಜನ್ಯ ಎಸಗಿರುವುದು ಅಪರಾಧವಾಗಿದೆ ಎಂದು ಅಧಿಕಾರಿಗಳ ದುರ್ವರ್ತನೆ ವಿರುದ್ಧ ಕಿಡಿಕಾರಿದರು.
ವಕೀಲನ ಮೇಲೆ ಈ ರೀತಿ ದೌರ್ಜನ್ಯ ಎಸಗಿರುವ ಪಾಂಡವಪುರ ಉಪವಿಭಾಗಾಧಿಕಾರಿ ಸಾಮಾನ್ಯ ಜನತೆ ಮತ್ತು ರೈತರ ಜತೆ ಯಾವ ರೀತಿ ವರ್ತಿಸಬಹುದು ಎಂಬುದನ್ನು ಊಹಿಸಲು ಸಹ ಅಸಾಧ್ಯವಾಗಿದೆ. ಆದ್ದರಿಂದ ಉಪವಿಭಾಗಾಧಿಕಾರಿ ಕೆ.ಆರ್.ಶ್ರೀನಿವಾಸ್ ಅವರನ್ನ ಸೇವೆಯಿಂದ ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಕರಣ ಕುರಿತಂತೆ ಸ್ವತಂತ್ರೃ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಿ ಉಪವಿಭಾಗಾಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವ ಮೂಲಕ ವಕೀಲರಿಗೆ ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ವಕೀಲರು ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ಎಂ ಟಿ ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ ಇತರರಿದ್ದರು.