

ಹುನಗುಂದ: ವಕೀಲರ ಕಲಿಕೆಗೆ ಇ-ಗ್ರಂಥಾಲಯ ಅವಶ್ಯವಾಗಿದ್ದು, ಅದನ್ನು ಸ್ಥಾಪಿಸುವುದರಿಂದ ಹಿರಿಯ ಮತ್ತು ಕಿರಿಯ ವಕೀಲರಿಗೆ ಹಾಗೂ ನ್ಯಾಯಾಧೀಶರಿಗೆ ನ್ಯಾಯಾಂಗ ವ್ಯವಸ್ಥೆಯ ಪ್ರಚಲಿತ ವಿದ್ಯಮಾನ ತಿಳಿದುಕೊಳ್ಳಲು ಅನುಕೂಲವಾಗಲಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶ ಹನಮಂತರಾವ್ ಕುಲಕರ್ಣಿ ಹೇಳಿದರು.
ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘ ವತಿಯಿಂದ ಗುರುವಾರ ಹಮ್ಮಿಕೊಳ್ಳಲಾಗಿದ್ದ ನೂತನ ವಕೀಲ ಸಂಘದ ಪದಾಧಿಕಾರಿಗಳ ಪ್ರಮಾಣ ವಚನ ಹಾಗೂ ಪದಗ್ರಹ ಸಮಾರಂಭ ಉದ್ಘಾಟಿಸಿ, ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಹಾರೈಸಿ ಮಾತನಾಡಿದರು.
ಈಗಾಗಲೇ ಹುಬ್ಬಳ್ಳಿ ಮತ್ತು ಧಾರವಾಡದ ನ್ಯಾಯಾಲಯದಲ್ಲಿ ಇ-ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ಹುನಗುಂದದಲ್ಲೂ ಕೂಡಾ ಇ-ಗ್ರಂಥಾಲಯ ಸ್ಥಾಪನೆ ಆಗಬೇಕು. ಅದರ ಜೊತೆಗೆ ಹುನಗುಂದ ವಕೀಲರ ಬಹುದಿನಗಳ ಬೇಡಿಕೆಯಾದ ಹೊಸ ವಕೀಲರ ಭವನ ಕಟ್ಟಡ ಕುರಿತು ಈಗಾಗಲೇ ವಕೀಲರ ಸಂಘದ ಮಾಜಿ ಅಧ್ಯಕ್ಷ ಪಿ.ಎಸ್. ಕಠಾಣಿ ಅವರು ಸಾಕಷ್ಟು ಪ್ರಯತ್ನವನ್ನು ಮಾಡಿದ್ದರಾದರೂ ಅವರ ಅವಧಿಯಲ್ಲಿ ನಿರ್ಮಾಣವಾಗಲಿಲ್ಲ, ಸದ್ಯ ನೂತನ ಅಧ್ಯಕ್ಷ ಮಾಧವ ದೇಶಪಾಂಡೆ ಮತ್ತು ಅವರ ಪದಾಧಿಕಾರಿಗಳ ಮೂಲಕ ವಕೀಲರ ಬಹುದಿನದ ಕನಸು ನನಸಾಗಲಿ ಎಂದರು.
ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನ ಅಧ್ಯಕ್ಷ ಎಸ್.ಎಸ್. ಮಿಟ್ಟಲಕೋಡ ನೂತನ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿ, ಮೊದಲು ನ್ಯಾಯಾಧೀಶ ಮತ್ತು ವಕೀಲರು ಕಾನೂನು ಪಾಲನೆ ಮಾಡಬೇಕು. ನಾವು ಪಾಲನೆ ಮಾಡದಿದ್ದರೆ ಸಮಾಜ ಕೂಡಾ ಪಾಲನೆ ಮಾಡುವುದಿಲ್ಲ. ನೂತನವಾಗಿ ಆಯ್ಕೆಯಾದ ಅಧ್ಯಕ್ಷ , ಪದಾಧಿಕಾರಿಗಳು ವಕೀಲರ ಅಭಿವದ್ಧಿಗಾಗಿ ಶ್ರಮಿಸಿ ಎಂದರು.
ವಕೀಲರ ಸಂಘದ ಚುನಾವಣಾಧಿಕಾರಿ ಎಲ್.ವೈ. ಜಡಿ, ಪ್ರಧಾನ ದಿವಾಣಿ ನ್ಯಾಯಾಧೀಶ ಬಸವರಾಜ ನೇಸರಗಿ, ಅಪರ ದಿವಾಣಿ ನ್ಯಾಯಾಧೀಶ ಮಹಾಂತೇಶ ಮಠದ, ಸರಕಾರಿ ಸಹಾಯಕ ಅಭಿಯೋಜಕ ಎಸ್.ಕೆ. ಹುಣಚಗಿ, ಎನ್.ಎಚ್. ಹೊಸಮನಿ, ನೂತನ ಅಧ್ಯಕ್ಷ ಮಾಧವ ದೇಶಪಾಂಡೆ, ಮಾಜಿ ಅಧ್ಯಕ್ಷ ಪ್ರಕಾಶ ಕಠಾಣಿ, ಎಸ್.ಎಂ. ಉಪ್ಪಾರ, ಎಂ.ಎ. ಸಂಗಮಕರ, ನೂತನ ಉಪಾಧ್ಯಕ್ಷ ವೀರೇಶ ಬಂಡಿ, ಕಾರ್ಯದರ್ಶಿ ರಮೇಶ್ ಕೊಕಾಟಿ, ಸಹ ಕಾರ್ಯದರ್ಶಿ ಎಂ.ಎಚ್. ಮಳ್ಳಿ, ಖಜಾಂಚಿಗಳಾದ ಕೆ.ಆರ್. ಜಲರೆಡ್ಡಿ, ಎ.ಸಿ. ಗೌಡರ ಉಪಸ್ಥಿತರಿದ್ದರು.
ಈಗಾಗಲೇ ರಾಜ್ಯದಲ್ಲಿ ಆರು ಜನ ನಕಲಿ ವಕೀಲರ ಮೇಲೆ ಪ್ರಕರಣ ದಾಖಲಾಗಿದೆ. ಗುರುವಾರ ಬೆಳಗಾವಿಯಲ್ಲಿ ಕೂಡಾ ಒಂದು ಪ್ರಕರಣ ದಾಖಲಾಗಿದ್ದು. ಬಾಗಲಕೋಟೆ, ಹುನಗುಂದದಲ್ಲೂ ನಕಲಿ ವಕೀಲರು ಕಂಡು ಬಂದರೆ ಬಾರ್ ಕೌನ್ಸಿಲಿಗೆ ಮಾಹಿತಿ ನೀಡಬೇಕು. ನಕಲಿ ವಕೀಲರ ಬಗ್ಗೆ ಬಾಗಲಕೋಟೆ ಜಿಲ್ಲೆಯ ಮೇಲೆ ಸಾಕಷ್ಟು ಅಪಸ್ವರ ಕೇಳಿ ಬರುತ್ತಿದೆ. ಅದನ್ನು ತಡೆಯುವ ನಿಟ್ಟಿನಲ್ಲಿ ಪ್ರತಿಯೊಬ್ಬ ವಕೀಲರು ಶ್ರಮಿಸಬೇಕು. -ಎಸ್.ಎಸ್. ವಿಟ್ಟಲಕೋಡ, ಅಧ್ಯಕ್ಷರು, ಕರ್ನಾಟಕ ವಕೀಲರ ಪರಿಷತ್, ಬೆಂಗಳೂರು.