

ಮಡಿಕೇರಿ:
ಜನತೆಯ ಆಶೋತ್ತರಗಳಿಗೆ ಭಾರತೀಯ ಸಂವಿಧಾನ ಅರ್ಥಪೂರ್ಣವಾಗಿ ಸ್ಪಂದಿಸುತ್ತದೆ ಎಂದು ಹೈಕೋರ್ಟ್ ನ್ಯಾಯಮೂರ್ತಿ ಮತ್ತು ಕೊಡಗು ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಜಿ. ಉಮಾ ಅಭಿಪ್ರಾಯಪಟ್ಟರು. ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ವಕೀಲರ ಕ್ರೀಡಾಕೂಟ ಸಂದರ್ಭ ಸಂವಿಧಾನ ದಿನಾಚರಣೆಯ ಅಂಗವಾಗಿ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿದರು.
ಭಾರತದ ಸಂವಿಧಾನ ಸದಾ ನಮ್ಮೊಂದಿಗೆ ಪ್ರತೀ ಹಂತದಲ್ಲಿಯೂ ಇರುವ ಜೀವಂತಿಕೆಯ ಸಂವಿಧಾನವಾಗಿದೆ. ಭಾರತದ ಪ್ರತೀಯೋರ್ವ ನಾಗರಿಕನ ಆಶೋತ್ತರಗಳಿಗೂ ಸ್ಪಂದಿಸುವ ಶಕ್ತಿ ಭಾರತೀಯ ಸಂವಿಧಾನಕ್ಕೆ ಇದೆ. ಕೊಡಗಿನ ಕ್ರೀಡಾಪಟುಗಳು ಸಾಧನೆ ಮೂಲಕ ಖ್ಯಾತಿ ಪಡೆದು ಈ ಜಿಲ್ಲೆಯ ಕ್ರೀಡಾಹಿರಿಮೆಯನ್ನು ಸಾರಿದ್ದು, ಇದೀಗ ವಕೀಲರು ಕೂಡ ಕ್ರೀಡಾಕೂಟದಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾಪ್ರತಿಭೆಯನ್ನು ಬೆಳಕಿಗೆ ತರುತ್ತಿರುವುದು ಶ್ಲಾಘನೀಯ ಬೆಳವಣಿಗೆಯಾಗಿದೆ ಎಂದರು.
ಕರ್ನಾಟಕ ವಿಧಾನಸಭೆಯ ಮಾಜಿ ಸಭಾಧ್ಯಕ್ಷ ಕೆ.ಜಿ. ಬೋಪಯ್ಯ ಮಾತನಾಡಿ 1949 ರ ನವೆÀಂಬರ್ 26 ರಂದು ಅಂಗೀಕರಿಸಲ್ಪಟ್ಟು, 1950ನೇ ಜನವರಿ 26 ರಂದು ಜಾರಿಗೆ ಬಂದ ಭಾರತದ ಸಂವಿಧಾನ ಜಗತ್ತಿನಲ್ಲಿಯೇ ಶ್ರೇಷ್ಟವಾದ ಸಂವಿಧಾನ ಎನಿಸಿದೆ. ಈ ಸಂವಿಧಾನ ರೂಪಿಸಿದ ಕೀರ್ತಿ ಖಂಡಿತವಾಗಿಯೂ ಡಾ. ಬಿ.ಆರ್.ಅಂಬೇಡ್ಕರ್ ಅವರಿಗೆ ಸಲ್ಲಬೇಕು. ಕಾಲದಿಂದ ಕಾಲಕ್ಕೆ ಅಗತ್ಯವಾದ ಬದಲಾವಣೆಗಳು ಸಂವಿಧಾನದಲ್ಲಿ ಆಗುತ್ತಿದ್ದು ಈವರೆಗೂ 128 ಸಲ ತಿದ್ದುಪಡಿ ಮಾಡಲಾಗಿದೆ. ಈ ವರ್ಷ ಸಂಸತ್‌ನಲ್ಲಿ ಶೇ.33 ರಷ್ಟು ಮಹಿಳಾ ಸದಸ್ಯರಿಗೆ ಅವಕಾಶ ಕಲ್ಪಿಸುವ ಮಸೂದೆಯನ್ನೂ ಜಾರಿಗೊಳಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಗಿದೆ. ಭಾರತದಲ್ಲಿ ಎಲ್ಲರೂ ಸಮಾನರು ಎಂದು ಈ ಮೂಲಕ ಸಾರಲಾಗಿದೆ ಎಂದು ಹೇಳಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಹೆಚ್.ಸಿ. ಶ್ಯಾಮ್ ಪ್ರಸಾದ್ ಮಾತನಾಡಿ, ಜೀವನದಲ್ಲಿ ಸೋಲು ಗೆಲವುಗಳನ್ನು ಸಮಾನಾಗಿ ಸ್ವೀಕರಿಸಬೇಕು ಎಂಬ ಸಂದೇಶ ಕ್ರೀಡಾಸ್ಪರ್ಧೆಗಳಲ್ಲಿ ಅಡಕವಾಗಿದೆ. ಮಾನಸಿಕ ನೆಮ್ಮದಿ ಮತ್ತು ದೈಹಿಕ ನೆಮ್ಮದಿಗೆ ಕ್ರೀಡೆಗಳು ಸಹಕಾರಿಯಾಗಿದೆ ಎಂದರು.
ಮಾಜಿ ಕಾನೂನು ಸಚಿವ ಎಂ.ಸಿ. ನಾಣಯ್ಯ ಮಾತನಾಡಿ, ಮನಸ್ಸಿನ ಕ್ಲೇಶೆಗಳಿಗೆ ನೆಮ್ಮದಿ ನೀಡುವಂಥ ಶಕ್ತಿ ಕ್ರೀಡೆಗಳಲ್ಲಿದೆ. ಹೀಗಾಗಿಯೇ ಕ್ರೀಡೆ ಮಾನಸಿಕ ಚೈತನ್ಯಕ್ಕೂ ಸಹಕಾರಿ ಎನಿಸಿದೆ ಎಂದರಲ್ಲದೇ, ವಕೀಲ ವೃಂದದವರು ಸಮಾಜದ ಒಗ್ಗಟ್ಟಿಗೆ ಸದಾ ಕಾಯೋನ್ಮುಖರಾಗಿರಬೇಕು ಎಂದು ಸಲಹೆ ನೀಡಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ.ಎ. ನಿರಂಜನ್ ಮಾತನಾಡಿ, ನ್ಯಾಯಮಂಡನೆಯಲ್ಲಿ ಸದಾ ಕ್ರಿಯಾಶೀಲರಾಗಿ ಮತ್ತು ಒತ್ತಡದಲ್ಲಿಯೇ ಕಾರ್ಯನಿರ್ವಹಿಸುವ ವಕೀಲ ವೃಂದದವರಿಗೆ ಕ್ರೀಡಾಕೂಟದ ಮೂಲಕ ಒತ್ತಡ ನಿವಾರಣೆಯೊಂದಿಗೆ ಕೌಟುಂಬಿಕ ಸಂಭ್ರಮಕ್ಕೆ ಈ ಕ್ರೀಡಾಸ್ಪರ್ಧೆಗಳು ನೆರವಾಗಲಿದೆ ಎಂದರು.
ರಾಷ್ಟ್ರೀಯ ಕ್ರೀಡಾಪಟುಗಳಾದ ಕೆಚ್ಚೆಟೀರ ರೇಷ್ಮಾ ಮತ್ತು ಎ.ಜಿ.ಪರ್ಲಿನ್ ಪೆಮ್ಮಯ್ಯ ಕ್ರೀಡಾಜ್ಯೋತಿಯನ್ನು ಕ್ರೀಡಾಂಗಣಕ್ಕೆ ತಂದರು.
ವೇದಿಕೆಯಲ್ಲಿ ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಜಿ. ಪ್ರಶಾಂತಿ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ.ಬಿ. ಪ್ರಸಾದ್, ಸಿವಿಲ್ ನ್ಯಾಯಾಧೀಶರಾದ ಎನ್.ಬಿ. ಜಯಲಕ್ಷಿö್ಮÃ , ಪ್ರಿನ್ಸಿಪಲ್ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ಮುನಿರತ್ಮಮ್ಮ, ಹೆಚ್ಚುವರಿ ಜೆ.ಎಂ.ಎಫ್.ಸಿ. ನ್ಯಾಯಾಧೀಶರಾದ ನಾಗೇಶ್, ವೀರಾಜಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ಜಿ. ಅಪ್ಪಣ್ಣ, ಕುಶಾಲನಗರ ವಕೀಲರ ಸಂಘದ ಅಧ್ಯಕ್ಷ ಆರ್.ಕೆ. ನಾಗೇಂದ್ರ ಬಾಬು, ಸೋಮವಾರಪೇಟೆ ವಕೀಲರ ಸಂಘದ ಅಧ್ಯಕ್ಷ ವಿಠಲ ಕಾಟ್ನಮನೆ, ಪೊನ್ನಂಪೇಟೆ ವಕೀಲರ ಸಂಘದ ಅಧ್ಯಕ್ಷ ಮುತ್ತಪ್ಪ , ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ.ಎಂ. ಕೇಶವ, ಉಪಾಧ್ಯಕ್ಷರಾದ ಎಂ.ಪಿ. ನಾಗರಾಜ್. ಖಜಾಂಜಿ ಜಿ.ಆರ್. ರವಿಶಂಕರ್ , ಜಂಟಿಕಾರ್ಯದರ್ಶಿ ಪವನ್ ಪೆಮ್ಮಯ್ಯ, ಕ್ರೀಡಾಸಮಿತಿ ಸಂಚಾಲಕ ದುಗ್ಗಳ ಕಪಿಲ್ ಕುಮಾರ್ ಇದ್ದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ನೂರಾರು ವಕೀಲರು ವೈವಿಧ್ಯಮಯ ಕ್ರೀಡಾಸ್ಪರ್ಧೆಗಳಲ್ಲಿ ಪಾಲ್ಗೊಂಡು ಗಮನ ಸೆಳೆದರು.