

ವಿಜಯವಾಣಿ ಸುದ್ದಿಜಾಲ ದೊಡ್ಡಬಳ್ಳಾಪುರ
ವಿವಿಧ ಸ್ತರದ ಕೆಳ ನ್ಯಾಯಾಲಯಗಳಲ್ಲಿ ಕನ್ನಡದಲ್ಲೇ ತೀರ್ಪು ನೀಡುತ್ತಿರುವ ಕ್ರಮ ಅತ್ಯಂತ ಶ್ಲಾಘನೀಯ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಧೀಶ ಎಂ.ಎಲ್.ರಘುನಾಥ್ ಅಭಿಪ್ರಾಯಪಟ್ಟರು.
ನಗರದ ಕೋರ್ಟ್ ಆವರಣದಲಿ ತಾಲೂಕು ವಕೀಲರ ಸಂಘ ಆಯೋಜಿಸಿದ್ದ ರಾಜ್ಯೋತ್ಸವ ಹಾಗೂ ವಕೀಲರ ದಿನ ಉದ್ಘಾಟಿಸಿ ಮಾತನಾಡಿ, ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದರೂ ಕನ್ನಡಕ್ಕಾಗಿ ಹೋರಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ಬೇಸರದ ಸಂಗತಿ. ಪ್ರಸ್ತುತ ಎಲ್ಲ ರಂಗಗಳಲ್ಲಿ ಕನ್ನಡ ಉಳಿಸುವ ಪ್ರಯತ್ನ ಅಗತ್ಯ. ನ್ಯಾಯಾಲಯಗಳಲ್ಲಿ ಕನ್ನಡದಲ್ಲಿ ವಾದಿಸಿದರೆ ಕೀಳು, ಆಂಗ್ಲ ಭಾಷೆಯಲ್ಲಿ ವಾದಿಸಿದರೆ ಮೇಲು ಎಂಬ ಮನೋಭಾವ ಹಿರಿಯ-ಕಿರಿಯ ವಕೀಲರು ಬಿಡಬೇಕು. ಮಾತೃಭಾಷೆಯಲ್ಲೇ ವಾದ ಮಂಡನೆ ಮಾಡಿದರೆ ಹೆಚ್ಚು ಪರಿಣಾಮಕಾರಿಯಾಗಲಿದೆ ಎಂದರು.
ಕನ್ನಡದಲ್ಲಿ ತೀರ್ಪು ಬರೆಯುವ ನ್ಯಾಯಾಧೀಶರಿಗೆ ರಾಜ್ಯ ಸರ್ಕಾರ ಪ್ರತಿವರ್ಷ ವಿಶೇಷ ಪಾರಿತೋಷಕ ನೀಡಿ ಗೌರವಿಸುತ್ತಿದೆ. ಸುಪ್ರೀಂಕೋರ್ಟ್‌ನ ಇ-ಕೋರ್ಟ್ ಸರ್ವಿಸ್‌ನಲ್ಲೂ ತೀರ್ಪುಗಳನ್ನು ಕನ್ನಡಕ್ಕೆ ಅನುವಾದಿಸುವ ಸೌಲಭ್ಯವಿದೆ ಎಂದರು.
ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ, ಕರ್ನಾಟಕ ವಕೀಲರ ಪರಿಷತ್ ಸದಸ್ಯ ಎನ್. ಶಿವಕುಮಾರ್, ಬೆಂಗಳೂರು ವಕೀಲರ ಸಂಘದ ಖಜಾಂಚಿ ಎಂ.ಟಿ.ಹರೀಶ್, ಜಿಲ್ಲಾ ಕಸಾಪ ಅಧ್ಯಕ್ಷ ಪ್ರೊ.ಬಿ.ಎನ್.ಕೃಷ್ಣಪ್ಪ, ಜಿಲ್ಲಾ ಗೌರವ ಕಾರ್ಯದರ್ಶಿ ಪ್ರೊ.ಕೆ.ಆರ್. ರವಿಕಿರಣ್, ತಾಲೂಕು ವಕೀಲರ ಸಂಘದ ಪ್ರ.ಕಾರ್ಯದರ್ಶಿ ಎ.ಕೃಷ್ಣಮೂರ್ತಿ, ಉಪಾಧ್ಯಕ್ಷ ಎಂ.ಆರ್.ಸುರೇಶ್, ಜಂಟಿ ಕಾರ್ಯದರ್ಶಿ ಸಿ.ವಿಜಯಕುಮಾರ್, ಖಜಾಂಚಿ ಎಂ.ಮುನಿರಾಜು. ನಿರ್ದೆಶಕರಾದ ಅನಿತಾ ಎನ್.ಚಂದ್ರಶೇಖರ್, ಚಂದೇಶ್ ಕುಮಾರ್, ಪ್ರವೀಣ್ ಕುಮಾರ್ ಗುಪ್ತ, ಸೈಯದ್ ನಾಜೀಮುಲ್ಲ, ಲೀಲಾವತಿ, ಎನ್.ಶಿವಕುಮಾರ್, ಮಹಮ್ಮದ್ ಮುಮ್ತಾಜ್, ಉಮೇಶ್, ಮೋಹನ್ ಕುಮಾರ್, ಪ್ರಭಾಕರ್, ವಕೀಲರಾದ ಎಲ್.ಸಂಜೀವಪ್ಪ, ದಯಾನಂದ ಗೌಡ ಇತರರಿದ್ದರು.