

ಮಂಡ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿ ಅಪಪ್ರಚಾರ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾ ವಕೀಲರ ಸಂಘದಿಂದ ಅಪರ ಜಿಲ್ಲಾಧಿಕಾರಿ ಬಿ.ಸಿ.ಶಿವಾನಂದಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು.
ಧರ್ಮಸ್ಥಳ ಮಂಜುನಾಥ ದೇವಾಲಯವು ಸತ್ಯ ಧರ್ಮಕ್ಕೆ ಹೆಸರು ವಾಸಿಯಾಗಿದೆ. ವಿಶ್ವದಾದ್ಯಂತ ತನ್ನದೆ ಆದ ಕೋಟ್ಯಂತರ ಭಕ್ತರನ್ನು ಹೊಂದಿದೆ. ಧರ್ಮಸ್ಥಳ ಕ್ಷೇತ್ರಕ್ಕೆ ತನ್ನದೇ ಆದ ಪಾವಿತ್ರ್ಯತೆಯಿದ್ದು, ಅಲ್ಲಿ ನಡೆಯುತ್ತಿರುವ ಸೇವೆಗಳು ಅವಿಸ್ಮರಣೀಯವಾಗಿವೆ. ಮಾನವೀಯತೆಯ ತಾಣವಾಗಿರುವ ಧರ್ಮಸ್ಥಳದಲ್ಲಿ ಯಾವುದೇ ಜಾತಿ ಭೇದವಿಲ್ಲದೇ ಸೇವೆ ನೀಡುತ್ತಿರುವುದಕ್ಕೆ ಅಪಖ್ಯಾತಿ ತರಲು ಹೊರಟಿದ್ದಾರೆ ಎಂದು ಆರೋಪಿಸಿದರು.
ಎಲ್ಲ ಜಾತಿಯ ಜನರು ವರ್ಗದವರು ಶ್ರದ್ಧಾ ಕೇಂದ್ರವಾಗಿ ರಾರಾಜಿಸುತ್ತಿರುವ ಅಲ್ಲಿನ ಚಿಂತನೆಗಳು ಸದಾ ಅನುಕರಣೆಯವಾಗಿದೆ. ಹೀಗಿರುವಾಗ ಇತ್ತೀಚೆಗೆ ಧರ್ಮಸ್ಥಳದ ಬಗ್ಗೆ ಕೆಲವು ಹಿಂದು ವಿರೋಧಿ ಶಕ್ತಿಗಳು ಧರ್ಮಸ್ಥಳ ಕ್ಷೇತ್ರಕ್ಕೆ ಕಳಂಕ ತರಲು ಅಪಪ್ರಚಾರ, ಷಡ್ಯಂತರ ಮತ್ತು ಸುಳ್ಳು ವದಂತಿಗಳನ್ನು ಸೃಷ್ಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಧರ್ಮಸ್ಥಳದ ಪಾವಿತ್ರ್ಯತೆಗೆ ಚ್ಯುತಿಯನ್ನುಂಟು ಮಾಡಿ ಮತ್ತು ಭಕ್ತರಲ್ಲಿ ಅಪನಂಬಿಕೆ ಮೂಡಿಸಿ, ಶಾಂತಿ ಕದಡಲು ಯತ್ನಿಸುತ್ತಿರುವುದು ಖಂಡನೀಯ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವುದಾಗಿ ಹೇಳಿಕೊಂಡು ಬಂದ ಅನಾಮಿಕ ವ್ಯಕ್ತಿಯ ಹುಚ್ಚಾಟಕ್ಕೆ ರಾಜ್ಯ ಸರ್ಕಾರವು ಸ್ಪಂದಿಸಿ, ಅವನು ತೋರಿದ ಜಾಗದಲೆಲ್ಲ ಗುಂಡಿ ತೋಡಿಸುತ್ತಿರುವುದು ಹಿಂದು ಧರ್ಮದ ಭಾವನೆಗಳನ್ನು ಘಾಸಿಗೊಳಿಸಲು ಮತ್ತು ಧರ್ಮಸ್ಥಳದ ಮಂಜುನಾಥನ ಬಗ್ಗೆ ಅಪಪ್ರಚಾರ ಮಾಡಿ ಸುಳ್ಳು ವದಂತಿಗಳನ್ನು ಹರಡಲು ಮಾಡುತ್ತಿರುವ ಷಡ್ಯಂತರ ಎಂದು ದೂರಿದರು.
ಕ್ರಿಮಿನಲ್ ಉದ್ದೇಶ ಹೊಂದಿರುವ ಯಾವುದೇ ವ್ಯಕ್ತಿಯು 18 ರಿಂದ 20 ಅಡಿ ಗುಂಡಿ ತೋಡಿ ಹೆಣ ಹೂಳುವಷ್ಟು ತಾಳ್ಮೆಯನ್ನು ಹೊಂದಿರುತ್ತಾನೆಯೇ?. ಆ ಹೆಣಗಳನ್ನು ಹೂಳಲು ನಿರ್ದೇಶನ ನೀಡಿದವರಾರು?. ಆ ಕೊಲೆಗಳು ಹೇಗೆ ನಡೆಯಿತು ಎಂದು ಸಮರ್ಪಕವಾದ ತನಿಖೆ ನಡೆಸುವುದು ಸೂಕ್ತವಾಗಿದೆ. ಆದರೆ, ಸರ್ಕಾರವು ಸಮರ್ಪಕವಾದ ತನಿಖೆ ನಡೆಸದೆ ಆ ಅನಾಮಿಕ ವ್ಯಕ್ತಿ ಹೇಳಿದ ದೂರಿನ್ನೇ ಕೇಳಿ ಶ್ರೀ ಕ್ಷೇತ್ರಕ್ಕೆ ಕೆಟ್ಟ ಹೆಸರು ತರುವುದು ಏಕೆ ಎಂದು ಪ್ರಶ್ನಿಸಿದರು.
ಕಳೆದ 20 ದಿನದಿಂದ ತನಿಖೆ, ಶೋಧ ಕಾರ್ಯ ನಡೆಸುತ್ತಿರುವ ಎಸ್‌ಐಟಿ ತಂಡ 17 ಸ್ಥಳಗಳಲ್ಲಿ ಗುಂಡಿಗಳನ್ನು ತೋಡಿದರೂ, ಇದುವರೆವಿಗೂ ಯಾವುದೇ ಕುರುಹು ಪತ್ತೆಯಾಗಿಲ್ಲ. ಉತ್ಖನನ ಮತ್ತು ತನಿಖೆ ನಡೆಸಲು ಅಧಿಕ ಹಣ ಖರ್ಚಾಗುತ್ತಿದ್ದು, ಇಂತಹ ವ್ಯಕ್ತಿಯ ಹುಚ್ಚಾಟಕ್ಕೆ ಬೆಲೆ ನೀಡಬಾರದು. ಇಲ್ಲಿತನಕ ಖರ್ಚು ಮಾಡಿರುವ ಹಣವನ್ನು ಈ ಅನಾಮಿಕ ವ್ಯಕ್ತಿಯಿಂದಲೇ ವಸೂಲು ಮಾಡಬೇಕು. ಸರ್ಕಾರ ಅನಾಮಿಕ ವ್ಯಕ್ತಿಯ ದೂರನ್ನು ನಂಬಿ ನಡೆಸುತ್ತಿರುವ ಉತ್ಖನನ ಕಾರ್ಯವನ್ನು ತಕ್ಷಣ ನಿಲ್ಲಿಸಬೇಕು. ಭಾರತದ ಪುಣ್ಯ ಕ್ಷೇತ್ರಗಳಲ್ಲೊಂದಾದ ಧರ್ಮಸ್ಥಳದ ಪಾವಿತ್ರ್ಯತೆ ಬಗ್ಗೆ ಚ್ಯುತಿಯನ್ನುಂಟು ಮಾಡಲು ಹುನ್ನಾರ ಮಾಡುತ್ತಿರುವ ಹಿಂದು ವಿರೋಧಿ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ವಕೀಲರ ಸಂಘದ ಜಿಲ್ಲಾಧ್ಯಕ್ಷ ಎಂ.ಟಿ.ರಾಜೇಂದ್ರ, ಉಪಾಧ್ಯಕ್ಷ ಮರಿಸ್ವಾಮಿ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಖಜಾಂಚಿ ಡಿ.ಎಂ.ಮಹೇಶ್, ವಕೀಲರಾದ ನವೀನ್, ಲಿಂಗರಾಜು, ನಂದೀಶ್ ಭಾಗವಹಿಸಿದ್ದರು.