

ಯಾದಗಿರಿ: ಪ್ರತಿಯೊಬ್ಬರೂ ಸತ್ಯ, ನ್ಯಾಯ, ನಿಷ್ಠೆಯಿಂದ ಜೀವನ ಸಾಗಿಸಬೇಕು ಎಂದು ಸಂತ ಸೇವಾಲಾಲ್ ಮಹಾರಾಜ ಹೇಳಿದ್ದಾರೆ. ಸಮಾಜದ ಏಳ್ಗೆಗೆ ಸೇವಾಲಾಲ್ ತಮ್ಮ ಜೀವನವನ್ನೆ ಮುಡಿಪಾಗಿಟ್ಟಿದ್ದರು ಎಂದು ಶಾಸಕ ವೆಂಕಟರಡ್ಡಿ ಮುದ್ನಾಳ್ ಹೇಳಿದರು.
ಜಿಲ್ಲಾಡಳಿತ ಭವನದ ಆಡಿಟೋರಿಯಂನಲ್ಲಿ ಶನಿವಾರ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸಂತಶ್ರೀ ಸೇವಾಲಾಲ್ ಮಹಾರಾಜ ಜಯಂತ್ಯುತ್ಸವ ಉದ್ಘಾಟಿಸಿದ ಅವರು, ಬಂಜಾರ ಸಮುದಾಯಕ್ಕೆ ತನ್ನದೇ ಆದ ಸಂಸ್ಕೃತಿ ಇದೆ. ಸಂತ ಸೇವಾಲಾಲರ ತತ್ವಾದರ್ಶ ಅಳವಡಿಸಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಸೇವಾಲಾಲ್ ಅವರ ತಂದೆ ಭೀಮಾನಾಯಕ 52 ತಾಂಡಾಗಳಿಗೆ ಮುಖ್ಯಸ್ಥರಾಗಿದ್ದರು. ತಂದೆಯಂತೆಯೇ ಆಳ್ವಿಕೆ ನಡೆಸಬಹುದಿತ್ತು. ಆದರೆ ಅವರ ಮನಸ್ಸು ಸಮಾಜ ಸುಧಾರಣೆಗೆ ತುಡಿಯುತ್ತಿತ್ತು. ಸೇವಾಲಾಲ್ ಆಶಯದಂತೆ ಪಾಲಕರು ತಮ್ಮ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು. ಇದರಿಂದ ಸದೃಢ ಸಮಾಜ ನಿಮರ್ಾಣವಾಗಲು ಸಾಧ್ಯವಿದೆ ಎಂದರು.
ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ ಮಾತನಾಡಿ, ಬಂಜಾರ ಸಮಾಜ ದುಡಿಮೆ ನಂಬಿ ಜೀವನ ಸಾಗಿಸುತ್ತದೆ. ಸಂತ ಸೇವಾಲಾಲ್ ತತ್ವ-ಸಿದ್ಧಾಂತಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಮಕ್ಕಳನ್ನು ಸರಿಯಾದ ದಾರಿಯಲ್ಲಿ ನಡೆಸಿ ಉನ್ನತ ವ್ಯಕ್ತಿಗಳನ್ನಾಗಿ ರೂಪಿಸಬೇಕು ಎಂದು ಸಲಹೆ ನೀಡಿದರು.
ಸಹಶಿಕ್ಷಕ ಕಿಶನ್ ಪವಾರ್ ಕುರಕುಂಬಳ ಉಪನ್ಯಾಸ ನೀಡಿ, ಪ್ರತಿಯೊಂದು ಸಮಾಜ ಸುಧಾರಕರ ತತ್ವ- ಸಿದ್ಧಾಂತಗಳನ್ನು ಪ್ರಚಾರ ಮಾಡಲು ಸರ್ಕಾರ ಜಯಂತಿ ಆಚರಿಸುತ್ತಿರುವುದು ಶ್ಲಾಘನೀಯ. ಸೇವಾಲಾಲ್ ಬಂಜಾರ ಮಾತ್ರವಲ್ಲ, ಪ್ರತಿಯೊಂದು ಸಮುದಾಯಗಳ ಒಳಿತಿಗೆ ಶ್ರಮಿಸಿದ್ದರು ಎಂದು ಸ್ಮರಿಸಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಜಿಪಂ ಸದಸ್ಯೆ ಅನಿತಾಬಾಯಿ ಸುರೇಶ ರಾಠೋಡ್, ನಗರಸಭೆ ಸದಸ್ಯೆ ಲಕ್ಷ್ಮೀ ರಮೇಶ ರಾಠೋಡ್ ಇತರರಿದ್ದರು. ಚಂದ್ರಶೇಖರ ಗೋಗಿ ನಾಡಗೀತೆ ಹಾಡಿದರು. ದತ್ತಪ್ಪ ಸಾಗನೂರ ಸ್ವಾಗತಿಸಿದರು. ಗುರುಪ್ರಸಾದ ವೈದ್ಯ ನಿರೂಪಣೆ ಮಾಡಿದರು. ರಾಜಕುಮಾರ ವಂದಿಸಿದರು. ಇದಕ್ಕೂ ಮುನ್ನ ನಗರದಲ್ಲಿ ಕಲಾ ತಂಡಗಳ ಸಾಂಸ್ಕೃತಿಕ ವೈಭವದೊಂದಿಗೆ ಸೇವಾಲಾಲ್ ಭಾವಚಿತ್ರದ ಅದ್ದೂರಿ ಮೆರವಣಿಗೆ ನಡೆಯಿತು.