

ಸಿಂಧನೂರು: ಕಕ್ಷಿದಾರರಿಗೆ ನ್ಯಾಯ ಒದಗಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಕೊಡಿಸುವುದು ವಕೀಲರ ಕರ್ತವ್ಯವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಎತ್ತಿ ಹಿಡಿಯುವ ಕೆಲಸವಾಗಬೇಕೆಂದು ಹೈಕೋರ್ಟ್ ಹಾಗೂ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದರು.
ನಗರದ ನ್ಯಾಯಾಲಯ ಸಂಕೀರ್ಣದಲ್ಲಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯ ಕಾರ್ಯಾರಂಭ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಿಂಧನೂರಿನಲ್ಲಿ ಜಿಲ್ಲಾ ನ್ಯಾಯಾಲಯ ಆರಂಭಿಸುವಲ್ಲಿ ವಕೀಲರ ಸಂಘದ ಪಾತ್ರ ಬಹುಮುಖ್ಯವಾಗಿದೆ. ಇಲ್ಲಿನ ಅವಶ್ಯಗಳ ಕುರಿತು ನಮ್ಮ ಗಮನಕ್ಕೆ ತಂದ ಬಳಿಕ ನಾವು ನಮ್ಮ ಕರ್ತವ್ಯ ಮಾಡಿದ್ದೇವೆ ಎಂದರು.
ಭಾರತಕ್ಕೆ ಮುಂಬೈ ಹೇಗೋ, ರಾಯಚೂರಿಗೆ ಸಿಂಧನೂರು ಹಾಗೆಯೇ ಪ್ರಮುಖವಾಗಿದೆ. ಆರ್ಥಿಕತೆ ಹಾಗೂ ಭತ್ತದ ಬೆಳೆಯಿಂದಲೇ ತಾಲೂಕು ಪ್ರಸಿದ್ಧಿ ಪಡೆದಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನ್ಯಾಯ ಎತ್ತಿ ಹಿಡಿಯಲು ಮತ್ತು ಜನರಿಗೆ ನ್ಯಾಯ ಒದಗಿಸುವಲ್ಲಿ ನ್ಯಾಯಾಲಯಗಳ ಪಾತ್ರ ಬಹಳ ಮುಖ್ಯವಾಗಿದೆ. ನ್ಯಾಯಾಧೀಶರೊಂದಿಗೆ ವಕೀಲರ ಪಾತ್ರವೂ ಅತಿ ಮುಖ್ಯವಾಗಿದೆ ಎಂದು ತಿಳಿಸಿದರು.
ವಕೀಲರು ಸಾಮಾಜಿಕ ಇಂಜಿನಿಯರ್‌ಗಳಿದ್ದಂತೆ. ನ್ಯಾಯಾಲಯದಲ್ಲಿ ಪ್ರಕರಣ ನಡೆಸುವುದರೊಂದಿಗೆ ಸಮಾಜವನ್ನು ತಿದ್ದುವುದೂ ವಕೀಲರ ಜವಾಬ್ದಾರಿಯಾಗಿದೆ. ಮಿಲಿಟರಿ ಹೊರತುಪಡಿಸಿದರೆ ಅತ್ಯಂತ ಧೈರ್ಯ ನೀಡುವುದು ವಕೀಲ ವೃತ್ತಿಯಾಗಿದೆ. ದೇಶದಲ್ಲಿ ಸಾಕಷ್ಟು ಅನಿಷ್ಟಗಳನ್ನ ಕಾನೂನಿನ ಮಾರ್ಗದಲ್ಲಿ ತೊಡೆದು ಹಾಕಿದ್ದೇವೆ. ಬ್ರಿಟಿಷರ ಕಾಲದಿಂದ ಅಸ್ಪಶ್ಯತೆ, ಬಾಲ್ಯವಿವಾಹ, ಮಹಿಳೆಯರಿಗೆ ಸಮಾನ ಹಕ್ಕು ಸೇರಿ ಹಲವು ಪದ್ಧತಿಗಳನ್ನು ಹೋಗಲಾಡಿಸುವಲ್ಲಿ ಕಾನೂನು ಪ್ರಮುಖ ಪಾತ್ರ ವಹಿಸಿದೆ. ವಕೀಲರು ನಿರಂತರ ಕಾನೂನು ಶಿಕ್ಷಣ ಪಡೆಯಬೇಕು ಎಂದು ನ್ಯಾಯಮೂರ್ತಿ ಎಂ.ಐ.ಅರುಣ್ ಹೇಳಿದರು.
ನ್ಯಾಯಮೂರ್ತಿ ವೆಂಕಟೇಶ ನಾಯ್ಕ ಟಿ., ಮಾತನಾಡಿ, ಈ ಹಿಂದೆ ಸೆಷೆನ್ಸ್ ಪ್ರಕರಣಗಳ ಇತ್ಯರ್ಥಕ್ಕಾಗಿ 90 ಕಿಲೋ ಮೀಟರ್ ದೂರದ ರಾಯಚೂರಿಗೆ ಹೋಗಬೇಕಿತ್ತು. ಆದರೀಗ ಸಿಂಧನೂರಿನಲ್ಲೇ ಜಿಲ್ಲಾ ನ್ಯಾಯಾಲಯ ಆಗಿರುವುದರಿಂದ ಕಕ್ಷಿದಾರರಿಗೆ ಅನುಕೂಲವಾಗಲಿದೆ ಎಂದರು.
ಜಿಲ್ಲಾ ನ್ಯಾಯಾಧೀಶ ಮಾರುತಿ ಎಸ್.ಬಗಾಡೆ, ಲೋಕೋಪಯೋಗಿ ಇಲಾಖೆ ಇಇ ಚನ್ನಬಸಪ್ಪ ಮೆಕಾಲೆ, ನ್ಯಾಯಾಧೀಶರಾದ ದೀಪಾ ಜಿ.ಮನೇರಕರ್, ಕೋಟೆಪ್ಪ ಕಾಂಬ್ಳೆ, ಅಚ್ಚಪ್ಪ ದೊಡ್ಡಬಸವ, ಆನಂದಪ್ಪ ಎಂ., ವಕೀಲರ ಸಂಘದ ಅಧ್ಯಕ್ಷ ಕೆ.ಭೀಮನಗೌಡ, ಖಜಾಂಚಿ ವೀರೇಶ ಚಿಂಚರಕಿ ಇತರರು ಇದ್ದರು.