

ಚಳ್ಳಕೆರೆ: ಕಲಾ ಶ್ರೀಮಂತಿಕೆಯನ್ನು ರಂಗಭೂಮಿ ಕಲಾವಿದರಿಂದ ಮಾತ್ರ ಪೋಷಿಸಲು ಸಾಧ್ಯ ಎಂದು ವಕೀಲ ದೊರೆ ನಾಗರಾಜ ಹೇಳಿದರು.
ತಾಲೂಕಿನ ನನ್ನಿವಾಳ ಪಂಚಾಯಿತಿ ವ್ಯಾಪ್ತಿಯ ಬಂಗಾರ ದೇವರಹಟ್ಟಿಯಲ್ಲಿ ಚೈತನ್ಯ ಸಾಂಸ್ಕೃತಿಕ ಸಂಘ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಇತ್ತೀಚೆಗೆ ಕನ್ನಡ ರಾಜ್ಯೋತ್ಸವ ಅಂಗವಾಗಿ ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ವಾಲ್ಮೀಕಿ ಮ್ಯಾಸ ಮಂಡಲ ಸಾಂಸ್ಕೃತಿಕೋತ್ಸವದ ಜಾನಪದ ಗ್ರಾಮ ಚಿತ್ತಾರೆ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು.
ಮಹನೀಯರ ಜೀವನ ಆದರ್ಶಗಳನ್ನು ನಾಟಕ ಅಭಿನಯದ ಮೂಲಕ ಜನರಿಗೆ ಮನವರಿಕೆ ಮಾಡಲು ರಂಗಭೂಮಿ ಭೂಮಿಕೆಯಾಗಿದೆ. ಇದರಿಂದ ಗ್ರಾಮೀಣ ಭಾಗದ ಜನತೆಗೆ ಕಲೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಿಚಯಿಸಲು ಅನುಕೂಲವಾಗುತ್ತದೆ. ಆಧುನಿಕತೆ ಬೆಳೆದಿದ್ದರೂ, ಆಡಳಿತ ಸರ್ಕಾರಗಳ ಯೋಜನೆ ಮತ್ತು ಕಾನೂನುಗಳ ಜಾಗೃತಿ ಇಲ್ಲ ಎಂದರು.
ಪೋಕ್ಸೋ ಪ್ರಕರಣಗಳು ಹೆಚ್ಚುತ್ತಿವೆ. ಮೌಢ್ಯ ಆಚರಣೆಗಳು ನಿಂತಿಲ್ಲ. ಬಾಲ್ಯ ವಿವಾಹ ಮತ್ತು ಜೀತ ಪದ್ಧತಿ ಈಗಲೂ ಕಾಣುತ್ತೇವೆ. ಕವಿ, ಕಲಾವಿದರು ತಮ್ಮ ಬರವಣಿಗೆ ಮತ್ತು ಅಭಿನಯದ ಮೂಲಕ ಸಮಾಜವನ್ನು ಜಾಗೃತಗೊಳಿಸುವ ಕಾರ್ಯಕ್ರಮಗಳು ಹೆಚ್ಚು ಆಯೋಜಿಸಬೇಕು ಎಂದು ತಿಳಿಸಿದರು.
ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ ಮಾತನಾಡಿ, ಸಂಗೀತ ಮತ್ತು ರಂಗಭೂಮಿಗೆ ಮನುಕುಲವನ್ನು ಆಕರ್ಷಿಸುವ ಮತ್ತು ಪರಿವರ್ತಿಸುವ ಶಕ್ತಿ ಇದೆ. ಗ್ರಾಮೀಣ ಭಾಗದ ಕಲಾವಿದರಿಗೆ ಉತ್ತೇಜನ ಸಿಗಬೇಕು. ಭೌಗೋಳಿಕವಾಗಿ ನನ್ನಿವಾಳ ಪ್ರದೇಶ ಧಾರ್ವಿುಕ ಆಚರಣೆಯ ನೆಲೆಯಾಗಿದೆ. ಇಲ್ಲಿ ಗೋವುಗಳ ಆರಾಧನೆ, ಪ್ರಾಕೃತಿಕ ದೇವರ ಪದ್ಧತಿಗಳ ಆಚರಣೆಗಳು ಈಗಲೂ ಬುಡಕಟ್ಟು ಸಂಸ್ಕೃತಿಯ ಪರಂಪರೆ ಕಾಣುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ದಲ್ಲಾಳಿ ಪಾಪಮ್ಮ, ಪೆದ್ದ ಪಾಪಯ್ಯ, ದೊಡ್ಡ ಕಾಟಯ್ಯ, ಪುನೀತ್ಪೂಜಾರ್, ಎನ್. ಶಿಲ್ಪಾ, ಚಿತ್ತಯ್ಯ ಕಲಾತಂಡಗಳಿಂದ ಭಜನೆ, ಕೋಲಾಟ ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳನ್ನು ಪ್ರದರ್ಶಿಸಿದರು.
ರಾಜ್ಯ ಪ್ರಶಸ್ತಿ ಪುರಸ್ಕೃತ ಕಿಲಾರಿ ಜೋಗಯ್ಯ, ವಕೀಲ ಅಪ್ಪಣ್ಣ, ಗ್ರಾಪಂ ಅಧ್ಯಕ್ಷೆ ಶಿವಮ್ಮ ರಾಜಣ್ಣ, ತಾಪಂ ಮಾಜಿ ಉಪಾಧ್ಯಕ್ಷ ದೊರೆ ಬೈಯಣ್ಣ, ಚಿನ್ನಯ್ಯ, ಕಾಟಯ್ಯ, ಕೆ.ಬಿ.ಓಬಣ್ಣ, ಹನುಮಂತಪ್ಪ ಪೂಜಾರ್, ಶಿವರಾಮ್ ಗಂಗಾಧರ್, ಭಜನೆ ಬೋರಯ್ಯ, ಸಣ್ಣಪಾಪಯ್ಯ, ಗೊಂಚಿಗಾರ್ ಪಾಪಯ್ಯ, ಈಶ್ವರಪ್ಪ, ಚಿನ್ನಯ್ಯ ಇದ್ದರು.