ಸಂವಿಧಾನ ರಕ್ಷಣೆಗೆ ಜನಾಂದೋಲನ ಅವಶ್ಯ

29 jlr
Published on

ಜಗಳೂರು: ಸಹಿಸಲಾರದಷ್ಟು ನೋವು ಅನುಭವಿಸಿ, ಪ್ರತಿಯೊಬ್ಬರಿಗೂ ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಹೋರಾಟ ನಡೆಸಿ ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ. ಆದರೆ ಇಂದು ಅಂತಹ ಅಮೂಲ್ಯ ಗ್ರಂಥಕ್ಕೆ ಆಪತ್ತು ಬಂದಿದೆ. ಅದನ್ನು ರಕ್ಷಣೆ ಮಾಡಲು ಜನಾಂದೋಲನ ನಡೆಸಬೇಕಾಗಿದೆ ಎಂದು ವಕೀಲ ಆರ್. ಓಬಳೇಶ್ ಹೇಳಿದರು.

ಪಟ್ಟದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಶನಿವಾರ ಸಂವಿಧಾನ ಸಂರಕ್ಷಕರ ಸಮಾವೇಶದ ಅಂಗವಾಗಿ ಏರ್ಪಡಿಸಿದ್ದ ಜನಾಂದೋಲನ ಚಲೋ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಭಾರತ ಸಂವಿಧಾನದಡಿ ದೇಶದ ಎಲ್ಲ ಜಾತಿಯ ಜನತೆಗೂ ಮೀಸಲಾತಿ ನೀಡಿದ್ದಾರೆ. ಆದರೆ ಮೀಸಲಾತಿ ಪಡೆದವರು ಅಂಬೇಡ್ಕರ್​ಗೆ ವಿರೋಧವಾಗಿ ನಿಂತಿರುವುದು ನಮ್ಮ ದುರಂತ. ಅಂಬೇಡ್ಕರ್ ಜಯಂತಿ ಸೇರಿ ಇತರ ಕಾರ್ಯಕ್ರಮಗಳ ಆಚರಣೆಗೆ ದಲಿತರು ಮಾತ್ರ ಮುಂದಿರುತ್ತಾರೆ. ಉಳಿದ ವರ್ಗದವರು ಇಂತಹ ಕಾರ್ಯಗಳಿಗೆ ಕೈಜೋಡಿಸದೇ ಒಂದು ಜಾತಿಗೆ ಸೀಮಿತಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳಾ ಒಕ್ಕೂಟದ ತಾಲೂಕು ಅಧ್ಯಕ್ಷೆ ದೊಣ್ಣೆಹಳ್ಳಿ ಚೌಡಮ್ಮ ಮಾತನಾಡಿ, ಮೊದಲು ಮಹಿಳೆಯರು ಪ್ರಾಣಿಗಳಿಗಿಂತ ಕೀಳಾಗಿ ಬದುಕಬೇಕಾಗಿತ್ತು. ಸಂವಿಧಾನ ಜಾರಿಯಾಗಿ ಸಾಮಾಜಿಕ ಸಮಾನತೆ ದೊರೆತ ನಂತರ ಮಹಿಳೆಯರು ತಲೆ ಎತ್ತಿ ನಡೆಯಲು ಸಾಧ್ಯವಾಗಿದೆ. ಇಂದಿನ ಧರ್ಮ ಹಾಗೂ ಜಾತಿವಾದಿಗಳಿಂದ ಮಹಿಳಾ ಹಕ್ಕುಗಳಿಗೆ ಧಕ್ಕೆ ಬರುತ್ತಿದೆ ಎಂದು ತಿಳಿಸಿದರು.

ಮಾನವ ಬಂಧುತ್ವ ವೇದಿಕೆ ಜಿಲ್ಲಾ ಮುಖಂಡ ಧನ್ಯಕುಮಾರ್, ಪ್ರಗತಿಪರ ಹೋರಾಟ ಸಮಿತಿ ಮುಖಂಡರಾದ ಮಲೆ ಮಾಚಿಕೆರೆ ಸತೀಶ್, ಗೌರಿಪುರ ಸತ್ಯಮೂರ್ತಿ, ಸಿದ್ದಮ್ಮನಹಳ್ಳಿ ಇಂದಿರಮ್ಮ, ವಕೀಲರ ರಂಗನಾಥ್, ಗೋಪಗೊಂಡನ ಹಳ್ಳಿ ಮಹಾಂತೇಶ್, ತಮಲೇಹಳ್ಳಿ ಅಂಜಿನಪ್ಪ, ಗ್ರಾಕೋಸ್ ಪಲ್ಲಾಗಟ್ಟೆ ಸುಧಾ, ಭರಮಸಮುದ್ರ ಕುಮಾರ್ ಸೇರಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net