

ಮಡಿಕೇರಿ:
ವಕೀಲ ವೃತ್ತಿಯ ಘನತೆ ಹೆಚ್ಚಿಸುವ ನಿಟ್ಟಿನಲ್ಲಿ ಯುವಪೀಳಿಗೆಯ ವಕೀಲರಿಗೆ ಹಿರಿಯ ವಕೀಲರು ಪ್ರೋತ್ಸಾಹ ನೀಡುವ ಮಾರ್ಗದರ್ಶಿಗಳಾಗಬೇಕೆಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆದ ವೀರಾಜಪೇಟೆ ಶಾಸಕ ಎ. ಎಸ್. ಪೊನ್ನಣ್ಣ ವಕೀಲ ವೃಂದಕ್ಕೆ ಕರೆ ನೀಡಿದರು. ನಗರದ ಹೊರವಲಯದ ರೆಸಾರ್ಟ್ ಒಂದರಲ್ಲಿ ಮಡಿಕೇರಿ ವಕೀಲರ ಸಂಘದ ವತಿಯಿಂದ ಮಂಗಳವಾರ ಆಯೋಜಿಸಿದ್ದ ವಕೀಲರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ದೇಶದ ಇತಿಹಾಸದಲ್ಲಿ ವಕೀಲರ ಸೇವೆ ಸದಾ ಸ್ಮರಣೀಯವಾಗಿದ್ದು, ಸ್ವಾತಂತ್ರ‍್ಯ ಹೋರಾಟದಲ್ಲಿಯೂ ವಕೀಲರು ಮುಂಚೂಣಿಯಲ್ಲಿದ್ದದ್ದು ಗಮನಾರ್ಹ. ಇಂಥ ಪವಿತ್ರ ವೃತ್ತಿಯಾದ ವಕೀಲ ವೃತ್ತಿಯ ಘನತೆಯನ್ನು ಸದಾ ಎತ್ತರದಲ್ಲಿರುವಂತೆ ಪ್ರತೀಯೋರ್ವ ವಕೀಲರೂ ಗಮನಹರಿಸಬೇಕು. ಗ್ರಾಮೀಣ ನ್ಯಾಯಾಲಯಗಳಿಂದ ಮೊದಲ್ಗೊಂಡು ಸರ್ವೋಚ್ಛ ನ್ಯಾಯಾಲಯದವರೆಗೂ ವಕೀಲರ ಪಾಂಡಿತ್ಯ ಸಮಾನವಾಗಿರುತ್ತದೆ.
ಇದರಿಂದಾಗಿಯೇ ಇಂದಿಗೂ ವಕೀಲ ವೃತ್ತಿ ತನ್ನ ನಂಬಿಕೆಯನ್ನು ದೇಶದಲ್ಲಿ ಉಳಿಸಿಕೊಂಡಿದೆ.ವಕೀಲರು ಸದಾ ಹೊಸವಿಚಾರಗಳನ್ನು, ನವ ಕಾನೂನುಗಳನ್ನು ಅಧ್ಯಯನ ಮಾಡುತ್ತಲೇ ಇರಬೇಕು. ಈ ಮೂಲಕ ವೃತ್ತಿಯಲ್ಲಿ ಜ್ಞಾನ ಸಂಪಾದನೆಗೆ ಸಕ್ರಿಯರಾಗಿರಬೇಕು. ಜ್ಞಾನದ ತಿಳುವಳಿಕೆಯಿಂದ ಉನ್ನತ ಮಟ್ಟದ ವಕೀಲರಾಗಲು ಸಾಧ್ಯ. ವಕೀಲರ ಜತೆಗೆ ವಕೀಲ ವೃತ್ತಿಯ ಸಂರಕ್ಷಣೆ ಕೂಡ ಆಗಬೇಕೆಂಬ ಉದ್ದೇಶದಿಂದ ಕಳೆದ ವರ್ಷ ಬೆಳಗಾವಿಯಲ್ಲಿ ನಡೆದ ವಿಧಾನಸಭಾ ಅಧಿವೇಶನದಲ್ಲಿ ವಕೀಲರ ಸಂರಕ್ಷಣಾ ಕಾಯಿದೆಯನ್ನು ಮಂಡಿಸಲಾಯಿತು. ವಕೀಲರ ರಕ್ಷಣೆಯಾದಾಗ ಆ ಮೂಲಕ ಸಂವಿಧಾನ, ಪ್ರಜಾಪ್ರಭುತ್ವದ ರಕ್ಷಣೆ ಕೂಡ ಆಗುತ್ತದೆ ಎಂಬ ಉದ್ದೇಶ ಈ ಕಾಯಿದೆ ಜಾರಿಯಾಗಿದೆ ಎಂದರು.
ಕರ್ನಾಟಕ ಸರ್ಕಾರದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಎನ್. ದೇವದಾಸ್ ಮಾತನಾಡಿ, 75 ವರ್ಷಗಳನ್ನು ಪೂರೈಸಿರುವ ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬ ಕೂಗು ಕೇಳಿಬಂದಿರುವ ಈ ಕಾಲಘಟ್ಟದಲ್ಲಿ, ವಕೀಲರು ಸಂವಿಧಾನದ ಸಂರಕ್ಷರಾಗುವತ್ತ ಮುಂದಡಿ ಇರಿಸಬೇಕು. ಸ್ವಾತಂತ್ರ‍್ಯ ಹೋರಾಟದಲ್ಲಿ ಸಕ್ರಿಯರಾಗಿದ್ದ ವಕೀಲ ಸಮೂಹ, ಸ್ವಾತಂತ್ರ‍್ಯಾನAತರ ಪ್ರಜಾಪ್ರಭುತ್ವದ ರಕ್ಷಣೆ ನಿಟ್ಟಿನಲ್ಲಿ ಹಿಂದಡಿ ಇರಿಸುವಂತೆ ಆಗಬಾರದು. ಕಠಿಣ ಶ್ರಮದಿಂದ ಯುವಪೀಳಿಗೆ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡು ಉನ್ನತ ಸ್ಥಾನ ಪಡೆಯಬೇಕು. ಆ ಮೂಲಕ ವೃತ್ತಿಯ ಗೌರವ ಕಾಪಾಡಿಕೊಳ್ಳಬೇಕು ಎಂದು ಹೇಳಿದರು.
ಮಡಿಕೇರಿ ವಕೀಲರ ಸಂಘದ ಅಧ್ಯಕ್ಷ ಎಂ. ಎ. ನಿರಂಜನ್ ಮಾತನಾಡಿ, ಕಾನೂನು ಪ್ರತಿಪಾದಕರಾಗಿ ಸಮಾಜದಲ್ಲಿ ಗುರುತಿಸಿಕೊಳ್ಳುವ ವಕೀಲರು ಸ್ವತಃ ಕಾನೂನನ್ನು ಪಾಲಿಸುವ ಮೂಲಕ ಆದರ್ಶಪ್ರಾಯರಾಗಿ ಜೀವಿಸುವುದು ಮುಖ್ಯ. ನ್ಯಾಯಾಲಯದ ಒಳಗೆ ಮತ್ತು ನ್ಯಾಯಾಲಯದ ಹೊರಗಡೆಯೂ ವಕೀಲರು ತಮ್ಮ ವ್ಯಕ್ತಿತ್ವಕ್ಕೆ ಕುಂದು ಬಾರದಂತೆ ವರ್ತಿಸಬೇಕಾಗಿದೆ ಎಂದರು.
ಮಡಿಕೇರಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಡಿ. ಎಂ. ಕೇಶವ, ಉಪಾಧ್ಯಕ್ಷ ಎಂ. ಪಿ. ನಾಗರಾಜ್, ಖಜಾಂಜಿ ಜಿ. ಆರ್. ರವಿಶಂಕರ್, ಉಪಾಧ್ಯಕ್ಷ ಪವನ್ ಪೆಮ್ಮಯ್ಯ, ಎಂ. ಆರ್. ಜಿತೇಂದ್ರ, ಕಪಿಲ್ ಕುಮಾರ್ ಮತ್ತಿತರರು ಇದ್ದರು.
ವಕೀಲರ ಸಾಧಕ ಮಕ್ಕಳಿಗೆ ಬಹುಮಾನ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದ ವಕೀಲರಿಗೆ ಬಹುಮಾನ ವಿತರಿಸಲಾಯಿತು, ವಕೀಲ ವೃಂದದಿAದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೆಳೆದವು.