

ದಾವಣಗೆರೆ : ನಾಡೋಜ ಕೋ. ಚನ್ನಬಸಪ್ಪ ಅವರ ಸಮಗ್ರ ಸಾಹಿತ್ಯ ಸಂಪುಟವನ್ನು ಸರ್ಕಾರ ಆದಷ್ಟು ಶೀಘ್ರವಾಗಿ ಹೊರತರಬೇಕು ಎಂದು, ನಾಡೋಜ ಗೊ.ರು. ಚನ್ನಬಸಪ್ಪ ಆಗ್ರಹಿಸಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಆರ್.ಎಲ್. ಕಾನೂನು ಕಾಲೇಜು ಸಹಯೋಗದಲ್ಲಿ ನಗರದ ಎ.ವಿ.ಕೆ. ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ, ನಾಡೋಜ ಕೋ. ಚನ್ನಬಸಪ್ಪ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಆಶಯ ನುಡಿಗಳನ್ನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಶತಮಾನೋತ್ಸವ ಆಚರಣೆ ನಡೆಯುತ್ತಿದೆ. ಫೆಬ್ರವರಿ ತಿಂಗಳಲ್ಲಿ ಬೆಂಗಳೂರಿನಲ್ಲಿ ಸಮಾರೋಪ ಸಮಾರಂಭ ಹಮ್ಮಿಕೊಳ್ಳಲಾಗುವುದು. ಜಿಲ್ಲೆಗಳಲ್ಲಿ ನಡೆದ ಕಾರ್ಯಕ್ರಮಗಳ ವರದಿ, ಉಪನ್ಯಾಸಗಳನ್ನು ಸಂಗ್ರಹಿಸಿ ಗ್ರಂಥದ ಲೋಕಾರ್ಪಣೆ ಹಾಗೂ ಸಾಕ್ಷೃಚಿತ್ರ ಬಿಡುಗಡೆ ಮಾಡಲಾಗುವುದು ಎಂದರು.
ಕೋ. ಚನ್ನಬಸಪ್ಪ ಸುಂದರ ಹಾಗೂ ಸಾರ್ಥಕ ಜೀವನ ನಡೆಸಿದರು. ನಾಡಿಗೆ ಅನುಪಮ ಸೇವೆ ಸಲ್ಲಿಸಿದರು ಎಂದು ಬಣ್ಣಿಸಿದರು.
ದೇಶಕ್ಕೆ ಸ್ವಾತಂತ್ರೃ ಬಂದು 75 ವರ್ಷ ಕಳೆದಿದ್ದರೂ ನಮ್ಮ ಸಮಾಜದಲ್ಲಿ ಈಗಲೂ ಅಸಮಾನತೆಯಿದೆ. ಜಾತಿಗಳ ವಿಭಜನೆ ಒಂದು ಕಡೆಗಾದರೆ ಉಳ್ಳವರು-ಇಲ್ಲದವರು, ಬಹುಸಂಖ್ಯಾತರು-ಅಲ್ಪಸಂಖ್ಯಾತರು ಹೀಗೆ ಅಂತರ ಹೆಚ್ಚಾಗಿ ಕಂಡುಬರುತ್ತಿದೆ ಎಂದು ವಿಷಾದಿಸಿದರು.
ಈ ನೆಲದ ಸಂಸ್ಕೃತಿಯಿಂದ ದೂರವಾಗುತ್ತಿದ್ದೇವೆ. ಕಾನೂನು-ಸುವ್ಯವಸ್ಥೆ ಹಳಿ ತಪ್ಪಿದೆ. ಭಯೋತ್ಪಾದನೆ, ಭ್ರಷ್ಟಾಚಾರ ಬೇರು ಬಿಟ್ಟಿವೆ. ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡುತ್ತಿದ್ದೇವೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಜಕಾರಣ ನಿರ್ಲಜ್ಯ ಸ್ಥಿತಿಯನ್ನು ತಲುಪಿದೆ. ಹಣ, ಅಧಿಕಾರದ ಹುಚ್ಚು ಎಲ್ಲೆಡೆ ಆವರಿಸಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಹೆಚ್ಚಾಗುತ್ತಿವೆ. ವೈಯಕ್ತಿಕ ಚಾರಿತ್ರೃ, ನೈತಿಕ ಮೌಲ್ಯಗಳ ಪತನವಾಗುತ್ತಿದೆ ಎಂದು ಹೇಳಿದರು.
ಇಂಥ ಸನ್ನಿವೇಶದಲ್ಲಿ ಕೋ. ಚನ್ನಬಸಪ್ಪ ಅವರು ನಡೆದ ದಾರಿ ನಮಗೆ ಆದರ್ಶವಾಗಬೇಕಿದೆ. ಅವರ ಸಾಹಿತ್ಯದಲ್ಲಿ ವೈಚಾರಿಕತೆ, ಮಾನವೀಯತೆ, ವಾಸ್ತವತೆಯ ಚಿತ್ರಣವಿದೆ ಎಂದು ತಿಳಿಸಿದರು.
ತಮ್ಮ ಹೆಸರು ಮತ್ತು ಕೋ. ಚನ್ನಬಸಪ್ಪ ಅವರ ಹೆಸರುಗಳಲ್ಲಿ ಸಾಮ್ಯತೆ ಇದ್ದುದರಿಂದ ಕೆಲವರು ಕೇಸ್‌ಗಳನ್ನು ತೆಗೆದುಕೊಂಡು ತಮ್ಮ ಬಳಿ ಬರುತ್ತಿದ್ದರು. ಕೋ. ಚನ್ನಬಸಪ್ಪ ಅವರು ಕಪ್ಪು ಕೋಟ್ ಧರಿಸುತ್ತಿದ್ದರು, ಆದರೆ ತಪ್ಪು ಕೋಟ್ ಮಾಡುತ್ತಿರಲಿಲ್ಲ ಎಂದು ಗೊರುಚ ನೆನಪಿಸಿಕೊಂಡರು.
ಸಮಾರಂಭ ಉದ್ಘಾಟಿಸಿದ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್. ಬಿಲ್ಲಪ್ಪ ಮಾತನಾಡಿ, ಹಳ್ಳಿಯಿಂದ ಬಂದ ಕೋ. ಚನ್ನಬಸಪ್ಪ ಅವರು ವೈವಿಧ್ಯಮಯ ವ್ಯಕ್ತಿತ್ವದ ಮೂಲಕ ನಾಡಿಗೇ ಬೆಳಕಾದವರು ಎಂದು ಬಣ್ಣಿಸಿದರು.