ಕಾನೂನು ವಿವಿ 7ನೇ ಘಟಿಕೋತ್ಸವ

Law University press meet
Published on

ಹುಬ್ಬಳ್ಳಿ : ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವವನ್ನು ನ. 5ರಂದು ಬೆಳಗ್ಗೆ 11.30ಕ್ಕೆ ಧಾರವಾಡ ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ಆಯೋಜಿಸಲಾಗಿದೆ.

ಇಲ್ಲಿನ ನವನಗರದ ಕಾನೂನು ವಿವಿಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದ ಕುಲಪತಿ ಡಾ. ಸಿ. ಬಸವರಾಜು, ರಾಜ್ಯಪಾಲ ಥಾವರ್​ಚಂದ್ ಗೆಹಲೋತ್ ಅಧ್ಯಕ್ಷತೆ ವಹಿಸುವರು. ಸಚಿವ ಎಚ್.ಕೆ. ಪಾಟೀಲ, ರಾಜ್ಯ ಗಡಿ ಮತ್ತು ನದಿ ಸಂರಕ್ಷಣಾ ಆಯೋಗದ ಅಧ್ಯಕ್ಷ ಡಾ. ಶಿವರಾಜ ಪಾಟೀಲ ಅತಿಥಿಗಳಾಗಿ ಪಾಲ್ಗೊಳ್ಳುವರು. ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಎಸ್.ಅಬ್ದುಲ್ ನಜೀರ್ ಹಾಗೂ ಹಿರಿಯ ವಕೀಲ ವಿ. ಸುದೇಶ ಪೈ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

2022-23 ಮತ್ತು 2023-24 ನೇ ಸಾಲಿನ 4,053 ವಿದ್ಯಾರ್ಥಿಗಳು ಹಾಗೂ 3,663 ವಿದ್ಯಾರ್ಥಿನಿಯರು ಸೇರಿ ಒಟ್ಟು 7,716 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾವುದು. ವಿಶ್ವವಿದ್ಯಾಲಯದಿಂದ 20 ಮತ್ತು ದಾನಿಗಳಿಂದ 8 ಸೇರಿದಂತೆ ಒಟ್ಟು 28 ಚಿನ್ನದ ಪದಕಗಳನ್ನು ನೀಡಲಾಗುವುದು. ಪ್ರತಿ ಕೋರ್ಸ್​ಗೆ 10 ರ್ಯಾಂಕ್ ಪ್ರಮಾಣ ಪತ್ರಗಳಂತೆ ಒಟ್ಟು 150 ರ್ಯಾಂಕ್ ಪ್ರಮಾಣ ಪತ್ರಗಳನ್ನು ವಿತರಿಸಲಾಗುವುದು ಎಂದು ವಿವರಿಸಿದರು.

ಕಾನೂನು ವಿಷಯದಲ್ಲಿ ಸಂಶೋಧನಾ ಮಹಾ ಪ್ರಬಂಧವನ್ನು ಮಂಡಿಸಿದ ಇಬ್ಬರು ವಿದ್ಯಾರ್ಥಿಗಳಿಗೆ ಪಿಎಚ್.ಡಿ ಪ್ರದಾನ ಮಾಡಲಾಗುವುದು. 29 ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ 7 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾನೂನು ಸಂಶೋಧನೆಗೆ 18 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದು, ಮುಂದಿನ ನಾಲ್ಕು ತಿಂಗಳಲ್ಲಿ 6 ರಿಂದ 8 ವಿದ್ಯಾರ್ಥಿಗಳು ಪಿಎಚ್.ಡಿ ಪದವಿ ಪಡೆದುಕೊಳ್ಳಲಿದ್ದಾರೆ. ಸಂಶೋಧನೆಯಲ್ಲಿ ತೊಡಗುವವರಿಗೆ ವಿವಿಯಲ್ಲಿ ವಿಶೇಷ ಸೌಲಭ್ಯ ಒದಗಿಸಲಾಗುತ್ತಿದೆ. ಆಡಳಿತ ಭವನ, ಗ್ರಂಥಾಲಯ, ಅತಿಥಿ ಗೃಹ ಹಾಗೂ ಉಪಹಾರ ಗೃಹ ಕಟ್ಟಡಗಳಿಗಾಗಿ ಅಂದಾಜು 100 ಕೋಟಿ ರೂ. ಅನುದಾನ ನೀಡುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವರಾದ ಗೀತಾ ಕೌಲಗಿ, ಡಾ. ರತ್ನಾ ಭರಮಗೌಡರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net