

ಚಿಕ್ಕಮಗಳೂರು: ದೈಹಿಕ ಆರೋಗ್ಯದಷ್ಟೇ ಮಹತ್ವವನ್ನು ಮಾನಸಿಕ ಆರೋಗ್ಯಕ್ಕೂ ನೀಡಬೇಕಿದ್ದು, ಈ ಕುರಿತು ಜನರಲ್ಲಿ ಅರಿವು ಮೂಡಿಸಬೇಕಿದೆ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷೆ ಶುಭಾ ಗೌಡರ್ ಸಲಹೆ ನೀಡಿದರು.
ರಾಮನಹಳ್ಳಿ ಡಿಎಆರ್ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಇತರ ಇಲಾಖೆಗಳ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಎಲ್ಲರೂ ನಿತ್ಯಜೀವನದಲ್ಲಿ ಏನಾದರೊಂದು ಒತ್ತಡಕ್ಕೆ ಒಳಗಾಗುವುದು ಸಹಜ. ಶಾಂತಿಯುತವಾಗಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಂಡಲ್ಲಿ ಯಾವುದೆ ಮಾನಸಿಕ ತೊಂದರೆಗಳಿಗೆ ಒಳಗಾಗದೆ ನೆಮ್ಮದಿಯ ಜೀವನ ನಡೆಸಬಹುದು. ಒತ್ತಡದಲ್ಲಿ ತೆಗೆದುಕೊಂಡ ನಿರ್ಧಾರಗಳಿಗೂ, ಸಮಾಧಾನದಿಂದ ಯೋಚಿಸಿ ಕೈಗೊಂಡ ತೀರ್ವನಗಳಿಗೂ ಸಾಕಷ್ಟು ವ್ಯತ್ಯಾಸಗಳಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರತಿವರ್ಷ ಅ.10ರಂದು ವಿಶ್ವ ಮಾನಸಿಕ ಆರೋಗ್ಯ ದಿನ ಆಚರಿಸಲಾಗುತ್ತಿದೆ. 1992ರಲ್ಲಿ ಮೊದಲ ಬಾರಿಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶ್ವಸಂಸ್ಥೆ ಈ ಕಾರ್ಯಕ್ರಮದ ಮಹತ್ವ ಅರಿತು 1994ರಲ್ಲಿ ಇದಕ್ಕೆ ಕೈಜೋಡಿಸಿತು. ಮಾನಸಿಕವಾಗಿ ಖಿನ್ನತೆ ದೂರವಿಡಲು ಪ್ರತಿನಿತ್ಯ ಯೋಗ, ಪ್ರಾಣಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಎಸ್ಪಿ ಅಕ್ಷಯ್ ಎಂ. ಮಚ್ಚೀಂದ್ರ ಮಾತನಾಡಿ, ಮಾನಸಿಕ ಆರೋಗ್ಯ ಕಾಪಾಡದಿದ್ದಲ್ಲಿ ಅದರ ನೇರ ಪರಿಣಾಮ ದೈಹಿಕ ಆರೋಗ್ಯದ ಮೇಲೆ ಬೀರಲಿದೆ ಎಂದು ಎಚ್ಚರಿಸಿದರು.