

ಮೈಸೂರು: ಕಾನೂನಿಗೆ ಜಯ ದೊರೆಯಲಿದೆ ಎಂಬುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಕರಣವೇ ನಿದರ್ಶನ ಎಂದು ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.
ನಗರದಲ್ಲಿ ಮಂಗಳವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಗೌರವದಿಂದ ರಾಜೀನಾಮೆ ಕೊಡುತ್ತಾರೆ ಎಂಬ ನಿರೀಕ್ಷೆ ಇದೆ. ಕೊಡದೆ ಇದ್ದರೂ ಹೈಕಮಾಂಡ್ ರಾಜೀನಾಮೆ ಪಡೆಯುತ್ತದೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಕಾಂಗ್ರೆಸ್ ಮೊದಲು ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಅವರಿಂದ ರಾಹುಲ್ ಗಾಂಧಿ ರಾಜೀನಾಮೆ ಪಡೆಯಬೇಕು. ನಮಗೆ ದಾಖಲೆ ನೋಡಿಯೇ ಪ್ರಾಸಿಕ್ಯೂಷನ್‌ಗೆ ಅನುಮತಿ ದೊರೆಯುತ್ತದೆ ಎಂಬುದು ಗೊತ್ತಿತ್ತು. ನ್ಯಾಯಾಲಯ ಎಲ್ಲವನ್ನು ಪರಿಶೀಲಿಸಿ ಅನುಮತಿ ನೀಡಿರುವುದರಿಂದ ಪ್ರಕರಣದಲ್ಲಿ ಸತ್ಯಾಂಶವಿದೆ ಎಂಬುದು ಜನರಿಗೂ ಗೊತ್ತಾಗಿದೆ ಎಂದರು.
ಸಿದ್ದರಾಮಯ್ಯ ರಾಜೀನಾಮೆ ನೀಡದೆ ಇದ್ದರೆ ಮುಂದಿನ ಹೋರಾಟದ ಕುರಿತು ಪಕ್ಷದ ವರಿಷ್ಠರೊಂದಿಗೆ ಚರ್ಚಿಸಲಾಗುವುದು. ಸಿದ್ದರಾಮಯ್ಯ ಅವರಲ್ಲಿ ನೈತಿಕತೆ ಎನ್ನುವುದು ಇದ್ದರೆ ಅಧಿಕಾರದಲ್ಲಿ ಮುಂದುವರಿಯಬಾರದು ಎಂದು ಆಗ್ರಹಿಸಿದರು.