ಕಾನೂನು ಪಾಲನೆಯಿಂದ ಅಪರಾಧ ಪ್ರಮಾಣ ಇಳಿಕೆ

D.15-MDG-1P1
Published on

ಮೂಡಿಗೆರೆ: ಬಾಲ್ಯದಲ್ಲಿ ಕಾನೂನುಗಳ ಬಗ್ಗೆ ಜ್ಞಾನ ಬೆಳೆಸಿಕೊಳ್ಳುವ ಮೂಲಕ ಸಮಾಜದ ಓರೆಕೋರೆಗಳನ್ನು ತಿದ್ದಿಕೊಂಡು ಸನ್ನಡತೆಯಲ್ಲಿ ಮುನ್ನಡೆದರೆ ನಾಯಕತ್ವದ ಗುಣ ಬೆಳೆಸಿಕೊಳ್ಳಲು ಸಾಧ್ಯವಿದೆ ಎಂದು ಮೂಡಿಗೆರೆ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶ ವಿ.ಜಯಪ್ರಕಾಶ್ ಹೇಳಿದರು.

ತಾಲೂಕಿನ ದಾರದಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾನೂನು ಸೇವಾ ಸಮಿತಿ ಮತ್ತು ವಕೀಲರ ಸಂಘದಿಂದ ಮಕ್ಕಳ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ತಾಲೂಕಿನಲ್ಲಿ ಕಾನೂನು ಸೇವಾ ಸಮಿತಿ ಅಸ್ತಿತ್ವದಲ್ಲಿದೆ. ಅನ್ಯಾಯಕ್ಕೆ ಒಳಗಾದ ವ್ಯಕ್ತಿ ಈ ಸಮಿತಿ ನೆರವು ಪಡೆಯಬಹುದು. ಅರಿವಿಲ್ಲದೆ ಕಾನೂನಿನ ಉಲ್ಲಂಘನೆ ಮಾಡಿದರೂ ಅಪರಾಧವಾಗುವುದರಿಂದ ಬಾಲ್ಯದಲ್ಲಿ ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು. ಪ್ರತಿ ಹೆಜ್ಜೆಗೂ ಕಾನೂನುಗಳನ್ನು ಪಾಲನೆ ಮಾಡಬೇಕು. ಹಾಗಾದರೆ ಮಾತ್ರ ಸಮಾಜದಲ್ಲಿ ಅಪರಾಧಗಳ ಸಂಖ್ಯೆ ಇಳಿಮುಖವಾಗಲಿದೆ ಎಂದು ತಿಳಿಸಿದರು.

ವಕೀಲರ ಸಂಘದ ಕಾರ್ಯದರ್ಶಿ ಕೆ.ಸಿ.ಚಂದ್ರಶೇಖರ್ ಮಾತನಾಡಿ, ಶಾಲಾ ಮಕ್ಕಳು ಕೂಡ ಕಾನೂನಿನ ಅರಿವು ಮೂಡಿಸಿಕೊಳ್ಳಬೇಕು ಎಂಬ ಉದ್ದೇಶದಿಂದ ಶಾಲೆ-ಕಾಲೇಜುಗಳಲ್ಲಿ ಕಾನೂನು ಅರಿವು ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಲಾಗುತ್ತದೆ. ಕಾನೂನಿನ ಉಲ್ಲಂಘನೆ ಶಿಕ್ಷಾರ್ಹ ಅಪರಾಧ ಎಂಬುವುದು ಪ್ರತಿಯೊಬ್ಬರ ಅರಿವಿಗೂ ಬರಬೇಕು ಎಂದು ತಿಳಿಸಿದರು.

ತಾಲೂಕು ಕಾನೂನು ಸೇವಾ ಸಮಿತಿಯಿಂದ ಮಕ್ಕಳಿಗೆ ಸಿಹಿ ವಿತರಿಸಲಾಯಿತು.ವಕೀಲರ ಸಂಘದ ಜಂಟಿ ಕಾರ್ಯದರ್ಶಿ ರಿಜ್ವಾನ್ ಅಲಿ, ಎಸ್ ಡಿಎಂಸಿ ಅಧ್ಯಕ್ಷ ಕೆ.ಎಸ್.ರಮೇಶ್, ಸದಸ್ಯರಾದ ಚಂದ್ರೇಶ್, ವನಿತಾ, ಮುಖ್ಯಶಿಕ್ಷಕ ಚೇತನ್, ಸಹ ಶಿಕ್ಷಕರಾದ ರವೀಂದ್ರ, ಜಯಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net