

ಮೈಸೂರು: ಹಕ್ಕುಗಳ ರಕ್ಷಣೆಗೆ ಕೇವಲ ಕಾನೂನು ರಚಿಸಿದರೆ ಪ್ರಯೋಜವಿಲ್ಲ. ಅವು ಜಾರಿಯಾಗುವಂತೆ ನೋಡಿಕೊಳ್ಳಬೇಕಾದ ಹೊಣೆಗಾರಿಕೆ ಎಲ್ಲರ ಮೇಲಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯಗಳ ಚೇರ್ಮನ್ ನ್ಯಾ. ಬಿ.ಎ.ಪಾಟೀಲ್ ಹೇಳಿದರು.
ಎಸ್‌ಬಿಆರ್‌ಆರ್ ಮಹಾಜನ ಕಾನೂನು ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಸಮಕಾಲೀನ ಯುಗದಲ್ಲಿ ಮಾನವ ಹಕ್ಕುಗಳ ಪ್ರಸ್ತುತತೆ- ಹೊಸ ಸವಾಲುಗಳು ಕುರಿತ ಒಂದು ದಿನ ರಾಷ್ಟ್ರಮಟ್ಟದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಹಕ್ಕುಗಳ ಜಾರಿಗೆ ಕೇವಲ ಕಾನೂನುಗಳನ್ನು ರಚಿಸಿ ರಕ್ಷಣೆಯ ಕ್ರಮ ಕೈಗೊಂಡರೆ ಯಾವುದೇ ಪ್ರಯೋಜನವಿಲ್ಲ. ಮಾನವ ಹಕ್ಕುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು ಇಂದಿನ ತುರ್ತು ಎಂದು ಅಭಿಪ್ರಾಯಪಟ್ಟರು.
ಮಹಿಳೆಯರ ರಕ್ಷಣೆಗೆ ತ್ವರಿತ ಕ್ರಮಗಳನ್ನು ಕೈಗೊಳ್ಳುವುದು. ದೌರ್ಜನ್ಯ ನಡೆಯದಂತೆ ನಿಯಂತ್ರಣ ಯೋಜನೆಗಳನ್ನು ರೂಪಿಸುವುದು, ಹಕ್ಕುಗಳನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಆದರೆ ದೇಶದಲ್ಲಿ ಬಹಳಷ್ಟು ಜನ ಬಡತನದಲ್ಲಿದ್ದು, ಶಿಕ್ಷಣದ ಕೊರತೆಯಿಂದ ಕಾನೂನು ತಿಳವಳಿಕೆ ಇಲ್ಲ. ಹಾಗಾಗಿ ಉತ್ತಮ ಶಿಕ್ಷಣ ನೀಡುವ ಮೂಲಕವೂ ಹಕ್ಕುಗಳ ರಕ್ಷಣೆ ಸಾಧ್ಯ ಎಂದರು.
ಎರಡನೇ ವಿಶ್ವ ಮಹಾಯುದ್ಧದ ಬಳಿಕ ಮಾನವ ಹಕ್ಕುಗಳ ಬಗ್ಗೆ ಗಂಭಿರ ಚರ್ಚೆ ನಡೆಯಿತು. ವಿಶ್ವ ಸಂಸ್ಥೆಯಿಂದ ಹಕ್ಕುಗಳ ಜಾರಿಗೆ 1948ರಂದು ನಿರ್ಧಾರ ಕೈಗೊಳ್ಳಲಾಯಿತು. ಭಾರತದ ಸಂವಿಧಾನವೂ ಮಾನವ ಹಕ್ಕುಗಳನ್ನು ನೈಸರ್ಗಿಕ ಹಕ್ಕುಗಳಾಗಿ ಗುರುತಿಸಿದ್ದು, ತುರ್ತು ಪರಿಸ್ಥಿತಿಯಲ್ಲೂ ಇವನ್ನು ಮೊಟಕುಗೊಳಿಸಲಾಗದು ಎಂದು ವಿವರಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಮಾನವ ಹಕ್ಕುಗಳ ರಕ್ಷಣೆಯಲ್ಲಿ ಭಯೋತ್ಪಾದನೆ ದೊಡ್ಡ ಸವಾಲಾಗಿದೆ. ನಕ್ಸಲಿಸಂ ಅಲ್ಲಿ ತೊಡಗಿದ್ದ ಅನೇಕರು ಉತ್ತಮ ಶೈಕ್ಷಣಿಕ ಸಾಧನೆ ತೋರಿದವರು. ಆದರೆ ಸಮಾಜದಲ್ಲಿ ಸೂಕ್ತ ಉದ್ಯೋಗ, ಸೌಲಭ್ಯ ದೊರೆಯದ ಕಾರಣ ಅವರು ಮತ್ತೊಂದು ಹಾದಿಯತ್ತ ಸಾಗುತ್ತಾರೆ. ಇದರ ಹಿಂದಿನ ಸಮಸ್ಯೆಗಳನ್ನು ಅರಿತು ಸರ್ಕಾರ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು ಎಂದರು.
ನ್ಯಾಯದಾನದಲ್ಲಿ ಸಮಸ್ಯೆಗಳಿದ್ದು, ಅವುಗಳನ್ನು ಎದುರಾಗುವ ಸವಾಲಿದೆ. ಮಾನವ ಹಕ್ಕುಗಳ ರಕ್ಷಣೆಯಲ್ಲಿ ತ್ವರಿತ ಹಾಗೂ ಸೂಕ್ತ ನ್ಯಾಯದಾನವು ಪ್ರಮುಖ ಪಾತ್ರವಹಿಸುತ್ತದೆ. ಆದರೆ ಇಂದು ಸಮಯದ ಚೌಕಟ್ಟಿನಲ್ಲಿ ನ್ಯಾಯ ಒದಗಿಸುವುದು ಕಷ್ಟವಾಗುತ್ತಿದೆ. ಇದಕ್ಕೆ ಎಲ್ಲರೂ ಹೊಣೆಗಾರರಾಗಿದ್ದು, ಪ್ರತಿಯೊಬ್ಬರೂ ತಮ್ಮ ಜವಾಬ್ದಾರಿ ಅರಿತು ಸುಧಾರಣೆ ಹೊಂದಬೇಕು ಎಂದು ಹೇಳಿದರು.
ದೇಶದ ಜೈಲುಗಳಲ್ಲಿ ಬಹಳಷ್ಟು ಜನ ವಿಚಾರಣಾಧೀನ ಕೈದಿಗಳು ಸೂಕ್ತ ಕಾನೂನು ಸಹಕಾರ ಸಿಗದೆ ವರ್ಷಗಳಿಂದ ಜೈಲಿನಲ್ಲಿಯೇ ಇದ್ದಾರೆ. ವಕೀಲರು, ನ್ಯಾಯಧೀಶರು ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ಸ್ವಲ್ಪ ಜಾಣ್ಮೆ ತೋರಿದರೂ ಹಲವು ಪ್ರಕರಣಗಳು ಇತ್ಯರ್ಥಗೊಳ್ಳುತ್ತವೆ. ನ್ಯಾಯದಾನದ ವಿಳಂಬ ಹಾಗೂ ತಪ್ಪುಗಳಿಂದ ಮಾನವ ಹಕ್ಕುಗಳಿಗೆ ಉಂಟಾಗುವ ಚ್ಯುತಿ ದೊಡ್ಡದು. ಕಾನೂನು ವಿದ್ಯಾರ್ಥಿಗಳು ಈ ಬಗ್ಗೆ ಜಾಗೃತರಾಗಿರಬೇಕು ಎಂದು ಸಲಹೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಬಸವರಾಜು ಮಾತನಾಡಿ, ಮಾನವ ಹಕ್ಕುಗಳ ಉಲ್ಲೇಖವು ವೇದ, ಪುರಾಣಗಳಲ್ಲೂ ಇವೆ. ಮನುಷ್ಯನ ಅಸ್ತಿತ್ವದ ಉಳಿವು ಮತ್ತು ವ್ಯಕ್ತಿತ್ವ ಬೆಳವಣಿಗೆಗೆ ಮಾನವ ಹಕ್ಕುಗಳು ಅಗತ್ಯ ಎಂದರು.
ನ್ಯಾಯ ಪಡೆಯಲು ಮೊದಲು ಸಂಪರ್ಕಿಸಬೇಕಾದ ಪೊಲೀಸ್ ಠಾಣೆಯಲ್ಲಿಯೇ ಇಂದು ಮಾನವ ಹಕ್ಕುಗಳ ಉಲ್ಲಂಘನೆ ಹೆಚ್ಚುತ್ತಿದೆ ಎನ್ನುವ ಪರಿಸ್ಥಿತಿ ಇದೆ. ಕಾರಾಗೃಹಗಳಲ್ಲೂ ಇಂತಹದ್ದೇ ಪರಿಸ್ಥಿತಿ ಉಂಟಾಗಿದೆ. ಕೇವಲ ಪ್ರಾಣಿಯಂತೆ ಬದುಕದೇ ಸರ್ವತೋಮುಖ ಅಭಿವೃದ್ಧಿ ಹೊಂದಲು ಸಹಕರಿಸುವುದೇ ಮಾನವ ಹಕ್ಕುಗಳ ಉದ್ದೇಶ ಎಂದರು.
ಮಹಾಜನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಡಾ.ಟಿ.ವಿಜಯಲಕ್ಷ್ಮೀ ಮುರಳೀಧರ್, ಆಡಳಿತಾಧಿಕಾರಿ ಪ್ರೊ.ಪಿ.ಸರೋಜಮ್ಮ, ಕಾನೂನು ಕಾಲೇಜಿನ ಪ್ರಾಂಶುಪಾಲೆ ಕೆ.ಸೌಮ್ಯಾ ಇದ್ದರು.