

ಕೆ.ಎಂ.ದೊಡ್ಡಿ: ಮುಂದಿನ ಶೈಕ್ಷಣಿಕ ವರ್ಷದಿಂದ ಕಾನೂನು ಕಾಲೇಜು ಆರಂಭಿಸಲಾಗುವುದು ಎಂದು ಭಾರತೀ ವಿದ್ಯಾ ಸಂಸ್ಥೆಯ ಚೇರ‌್ಮನ್, ವಿಧಾನಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ತಿಳಿಸಿದರು.
ಇಲ್ಲಿನ ಭಾರತೀ ವಿದ್ಯಾಸಂಸ್ಥೆಯ ಕುವೆಂಪು ಸಭಾಂಗಣದಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ವಾರ್ಷಿಕ ಪ್ರಾಯೋಗಿಕ ಪರೀಕ್ಷಾ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ನಗರ ಪ್ರದೇಶದಲ್ಲಿ ಇಲ್ಲದ ಕೋರ್ಸ್‌ಗಳು ಭಾರತೀ ವಿದ್ಯಾ ಸಂಸ್ಥೆಯಲ್ಲಿ ಇದ್ದು, ಜೂನ್ 2025 ಕಾನೂನು ಕಾಲೇಜು ಆರಂಭಿಸುವ ಮೂಲಕ ವಿದ್ಯಾ ಸಂಸ್ಥೆಗೆ ಮತ್ತೊಂದು ಗರಿಮೆ ಹೆಚ್ಚಿಸಲಾಗುತ್ತಿದೆ ಎಂದರು.
ನನ್ನ ತಂದೆ ಮಾಜಿ ಸಂಸದ ದಿವಂಗತ ಜಿ.ಮಾದೇಗೌಡ ಅವರು ಹಳ್ಳಿಗಾಡಿನ ವಿದ್ಯಾರ್ಥಿಗಳಿಗಾಗಿ ವಿದ್ಯಾ ಸಂಸ್ಥೆ ತೆರೆದಿದ್ದು, ಅದು ಶರವೇಗದಲ್ಲಿ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿದೆ. ಬಡ ಮತ್ತು ಮಧ್ಯಮ ವಿದ್ಯಾರ್ಥಿಗಳ ಆಶಾಕಿರಣವಾಗಿರುವ ಸಂಸ್ಥೆ ಮರಿ ಮಾನಸಗಂಗೋತ್ರಿ ಎಂಬ ಹೆಗ್ಗಳಿಕೆಗೆ ಕಾರಣವಾಗಿದೆ ಎಂದು ತಿಳಿಸಿದರು.
ನಮ್ಮ ಸಂಸ್ಥೆ ಆರಂಭವಾಗಿ 78 ವರ್ಷಗಳಾಗಿದ್ದು, ಗುಣಮಟ್ಟದ ಶಿಕ್ಷಣವೇ ನಮ್ಮ ಮೂಲಮಂತ್ರವಾಗಿದೆ. ನನ್ನ ತಂದೆ ಹಾಕಿ ಕೊಟ್ಟ ಮಾರ್ಗದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತ ಗ್ರಾಮೀಣ ಮಕ್ಕಳ ಉಜ್ವಲ ಭವಿಷ್ಯ ರೂಪಿಸಲು ಹಲವು ಶೈಕ್ಷಣಿಕ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ಹೇಳಿದರು.
ಸಂಸ್ಥೆ ವತಿಯಿಂದ ಮೆಡಿಕಲ್ ಕಾಲೇಜು ಆರಂಭಿಸಬೇಕು ಎಂಬ ಮಹತ್ವಕಾಂಕ್ಷೆ ಇದ್ದು, ಅದಕ್ಕೆ ಬೇಕಾದ ರೂಪುರೇಷೆಗಳ ಸಿದ್ಧತೆ ನಡೆಯುತ್ತಿದೆ. ಇನ್ನೆರಡು ವರ್ಷದಲ್ಲಿ ಕೇಂದ್ರಿಯ ಪಠ್ಯಕ್ರಮ(ಸಿಬಿಎಸ್‌ಸಿ) ಆಧಾರಿತ ಪ್ರಾಥಮಿಕ ಮತ್ತು ಪ್ರೌಢಶಾಲೆ ಆರಂಭಿಸಲು ಸಿದ್ಧತೆ ಕೈಗೊಂಡಿದ್ದು ಕಾಮಗಾರಿ ಪ್ರಗತಿಯಲ್ಲಿದೆ ಎಂದರು.
ಅನುದಾನ, ಅನುದಾನರಹಿತ ಮತ್ತು ಸರ್ಕಾರಿ ಶಿಕ್ಷಕರು ಮತ್ತು ಉನ್ಯಾಸಕರ ಸಮಸ್ಯೆಗಳನ್ನು ಅರಿತಿದ್ದು, ಅವರ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ವಹಿಸುತ್ತೇನೆ. ಇದಲ್ಲದೆ ಸಂಘ-ಸಂಸ್ಥೆಗಳು ಮತ್ತು ಪ್ರಾಂಶುಪಾಲರ ಸಂಘಕ್ಕೆ ನಾನು ಧ್ವನಿಯಾಗಿ, ನೆರವು ನೀಡುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಸಿ.ಚಲುವಯ್ಯ ಮಾತನಾಡಿ, ಮಂಡ್ಯ ಜಿಲ್ಲೆಯನ್ನು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಇದಕ್ಕೆ ಉಪನ್ಯಾಸಕರು ಸಹಕರಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಅಯಾಮ ಸೃಷ್ಟಿಸಬೇಕು ಎಂದು ಕರೆ ನೀಡಿದರು.
ಪ್ರಾಂಶುಪಾಲರ ಸಂಘದ ಜಿಲ್ಲಾಧ್ಯಕ್ಷ ಯು.ಎಸ್. ನಟರಾಜು, ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಎಂ.ಆರ್. ಚನ್ನಕೃಷ್ಣಯ್ಯ, ಜಿಲ್ಲಾ ಸಂಯೋಜಕರಾದ ಗುರುಲಿಂಗೇಗೌಡ, ಮೆಳ್ಳಹಳ್ಳಿ ಜವರಾಯಿ, ಗಣೇಶ್ ಕುಮಾರ್, ಮಹದೇವಸ್ವಾಮಿ, ಕೆಂಪಯ್ಯ, ಕಲ್ಲಪ್ಪ, ರಾಧಾ, ಸುಧಾ, ಪ್ರವೀಣ್‌ಕುಮಾರ್, ಮಹೇಶ್ ಚಂದ್ರ ವರನ್ನು ಅಭಿನಂದಿಸಲಾಯಿತು.
ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ. ನಂಜೇಗೌಡ, ಭಾರತೀ ಹೆಲ್ತ್‌ಸೈನ್ಸ್‌ಸ್ ನಿರ್ದೇಶಕ ತಮಿಜ್‌ಮಣಿ, ವಿವಿಧ ಅಂಗ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಎಂ.ಎಸ್. ಮಹದೇವಸ್ವಾಮಿ, ಡಾ. ಚಂದನ್, ಸಿ.ವಿ. ಮಲ್ಲಿಕಾರ್ಜುನ, ಪಲ್ಲವಿ, ಪುಟ್ಟಸ್ವಾಮಿಗೌಡ ಸೇರಿದಂತೆ ಮತ್ತಿತರಿದ್ದರು.