ಸರ್ಕಾರಿ ಕಚೇರಿಗಳಲ್ಲಿ ದೂರು ಸಮಿತಿ ರಚಿಸಿ ; ಅರಿವು ಕಾರ್ಯಕ್ರಮದಲ್ಲಿ ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ಸಲಹೆ

09TMK_Ceo_saki
Published on

ತುಮಕೂರು: ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಸರ್ಕಾರಿ ಕಚೇರಿಗಳಲ್ಲಿ ದೂರು ಸಮಿತಿ ರಚಿಸಬೇಕು ಎಂದು ಜಿಪಂ ಸಿಇಒ ಡಾ.ಕೆ.ವಿದ್ಯಾಕುಮಾರಿ ತಿಳಿಸಿದರು.

ಜಿಲ್ಲಾ ಬಾಲಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ 2013 ಅಧಿನಿಯಮ ಮತ್ತು ಸಖಿ-ಒನ್ ಸ್ಟಾಫ್ ಸೆಂಟರ್ ಘಟಕದ ಸೇವೆಗಳ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸ್ತ್ರೀ-ಪುರುಷರಿಬ್ಬರಿಗೂ ಸಮಾನ ಅವಕಾಶ ಇದ್ದು, ಕೆಲಸದ ಸ್ಥಳದಲ್ಲಿ ಅಲ್ಲದೆ ಬೇರೆ ಕಡೆಯೂ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿದ್ದು, ಸರ್ಕಾರಿ ಕಚೇರಿಗಳಲ್ಲಿ ದೌರ್ಜನ್ಯ ನಡೆದರೆ ಜಿಲ್ಲಾ ಮಟ್ಟದಲ್ಲಿ ಸ್ಥಳೀಯ ದೂರು ಸಮಿತಿಗೆ ಹಾಗೂ ತಾಲೂಕು ಮಟ್ಟದಲ್ಲಿ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕು ಎಂದರು.

ಜಿಲ್ಲಾ ನಿರೂಪಣಾಧಿಕಾರಿ ಎಸ್.ಶಿವಕುಮಾರಯ್ಯ ಮಾತನಾಡಿ, ಸಿಡಿಪಿಒ ಜತೆಯಲ್ಲಿ ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳಲ್ಲಿ ಸಭೆ ನಡೆಸಿ ಲೈಂಗಿಕ ಕಿರುಕುಳದ ಬಗ್ಗೆ ಮಹಿಳೆಯರಿಗೆ ಅರಿವು ಮೂಡಿಸಬೇಕು ಎಂದರು. ವಕೀಲ ಸಾ.ಚಿ.ರಾಜ್‌ಕುಮಾರ್ ಮಾತನಾಡಿ, ಮಹಿಳೆಯರನ್ನು ಕೆಟ್ಟ ದೃಷ್ಟಿಯಲ್ಲಿ ನೋಡುವ ನೌಕರರ ಮನವನ್ನು ಪರಿವರ್ತಿಸಬೇಕು. ದೌರ್ಜನ್ಯಕ್ಕೊಳಗಾದ ಮಹಿಳಾ ನೌಕರರು 181ಕ್ಕೆ ಕರೆ ಮಾಡಿ ಸಮಸ್ಯೆ ವ್ಯಕ್ತಪಡಿಸಬಹುದು. ಇವರು ನೀಡುವ ದೂರನ್ನು ಹೊರಗಡೆ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಬಾರದು ಎಂದರು.

ನಿಗದಿತ ಅವಧಿಯೊಳಗೆ ಚರ್ಚಿಸಿ: ಹತ್ತು ಮಂದಿಗಿಂತ ಮೇಲ್ಪಟ್ಟ ಮಹಿಳೆಯರು ಒಂದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರೆ ಅಲ್ಲಿ ಆಂತರಿಕ ದೂರು ಸಮಿತಿಯನ್ನು ರಚನೆ ಮಾಡಬೇಕು. ಸ್ಥಳೀಯ ದೂರು ಸಮಿತಿಯಲ್ಲಿ ಅವರ ಸಮಸ್ಯೆಗಳನ್ನು ನಿಗದಿತ ಅವಧಿಯೊಳಗೆ ಚರ್ಚಿಸಬೇಕು ಎಂದು ಸ್ಥಳೀಯ ದೂರು ನಿವಾರಣಾ ಸಮಿತಿ ಅಧ್ಯಕ್ಷೆ ಎಚ್.ಆರ್.ಶಾಲಿನಿ ಸಲಹೆ ನೀಡಿದರು. ಸಮಾಜದಲ್ಲಿ ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ವೈದ್ಯಕೀಯ ನೆರವು, ಕಾನೂನು ನೆರವು, ಆಪ್ತ ಸಮಾಲೋಚನೆಯೊಂದಿಗೆ ತಾತ್ಕಾಲಿಕ ವಸತಿ ಸೌಲಭ್ಯವನ್ನು ಸಖಿ ಒನ್ ಸ್ಟಾಫ್ ಸೆಂಟರ್ ಒದಗಿಸುತ್ತಿದ್ದು, ಸಖಿ ಮಹಿಳೆಯರ ಆಪ್ತ ಗೆಳತಿಯಾಗಿ ನೊಂದ ಮಹಿಳೆಯರಿಗೆ ನೀಡುವ ನೆರವನ್ನು ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net