

ಚನ್ನರಾಯಪಟ್ಟಣ : ಮಹಿಳೆಯರಿಗೆ ತಮ್ಮ ಹಕ್ಕುಗಳು ಹಾಗೂ ಕರ್ತವ್ಯಗಳ ಕುರಿತು ಮಾಹಿತಿಯಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಎ. ಅರುಣ ಕುಮಾರಿ ತಿಳಿಸಿದರು. ಪಟ್ಟಣದ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ವಕೀಲರ ಸಂಘ, ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಹಾಗೂ ರೋಟರಿ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಮಹಿಳೆಯರ ಹಕ್ಕು ಮತ್ತು ಕರ್ತವ್ಯಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಎರಡನೇ ಅಧಿಕ ಸಿವಿಲ್ ನ್ಯಾಯಾಧೀಶರಾದ ಮಧುಶ್ರೀ ಮಾತನಾಡಿ, ಪ್ರತಿ ಮಹಿಳೆಗೂ ಹಕ್ಕುಗಳ ಬಗ್ಗೆ ಮಾಹಿತಿ ಬಹಳ ಮುಖ್ಯವಾಗಿದೆ. ಸಮಾನ ಹಕ್ಕುಗಳ ಬಗ್ಗೆ ಮಾಹಿತಿ ಪಡೆದಾಗ, ಸಮಾಜದಲ್ಲಿ ಅಗತ್ಯ ಪಾತ್ರ ವಹಿಸಲು ಸಾಧ್ಯವಾಗುತ್ತದೆ. ಭಾರತದಲ್ಲಿ ಮಹಿಳೆಯರಿಗೆ ಕಾನೂನು ಅರಿವಿನ ಮಟ್ಟ ಹೆಚ್ಚಾಗಬೇಕಿದೆ. ಆಗ ಮಾತ್ರ ಸ್ವ್ವತಂತ್ರ ಜೀವನವನ್ನು ಆನಂದಿಸಲು ಸಾಧ್ಯವಾಗುತ್ತದೆ ಎಂದರು. ಹಕ್ಕುಗಳ ಬಗ್ಗೆ ತಿಳಿದುಕೊಂಡರೆ ಯಾವುದೇ ಆಯುಧ ಬೇಕಾಗಿಲ್ಲ. ಯಾವುದೇ ಅನ್ಯಾಯದ ವಿರುದ್ಧ ಹೋರಾಡಬಹುದು ಎಂದರು.