ಅತಿಯಾದ ಓಲೈಕೆಯಿಂದ ಕಾನೂನು ಸುವ್ಯವಸ್ಥೆ ಹಾಳು

20NGD2
ನಂಜನಗೂಡು ತಾಲೂಕಿನ ಕಳಲೆ ಗ್ರಾಮದಲ್ಲಿ ಶನಿವಾರ ಕಳಲೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಶಾಸಕ ಬಿ.ಹರ್ಷವರ್ಧನ್ ಮಾತನಾಡಿದರು. ಕೆಂಡಗಣ್ಣಪ್ಪ, ಚಿಕ್ಕರಂಗನಾಯ್ಕ, ಮಹೇಶ್ ಇತರರು ಇದ್ದರು.
Published on

ನಂಜನಗೂಡು: ಕಾಂಗ್ರೆಸ್ ಸರ್ಕಾರ ವೋಟಿನ ಆಸೆಗಾಗಿ ಒಂದು ಸಮುದಾಯವನ್ನು ಅತಿಯಾಗಿ ಓಲೈಕೆ ಮಾಡುತ್ತಿರುವುದರಿಂದ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹಾಳಾಗಿದ್ದು, ಅರಾಜಕತೆ ಸೃಷ್ಟಿಯಾಗಿದೆ. ಮೊದಲು ಸಿಎಂ ಸಿದ್ದರಾಮಯ್ಯ ರಾಜ್ಯದ ಜನರ ಜೀವಕ್ಕೆ ಗ್ಯಾರಂಟಿ ನೀಡಲಿ ಎಂದು ಮಾಜಿ ಶಾಸಕ ಬಿ.ಹರ್ಷವರ್ಧನ್ ವಾಗ್ದಾಳಿ ನಡೆಸಿದರು.


ತಾಲೂಕಿನ ಕಳಲೆ ಗ್ರಾಮದಲ್ಲಿ ಶನಿವಾರ ಕಳಲೆ ಮಹಾಶಕ್ತಿ ಕೇಂದ್ರ ವ್ಯಾಪ್ತಿಯ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜನರಿಗೆ ರಕ್ಷಣೆ ಇಲ್ಲವಾಗಿದೆ. ಹುಬ್ಬಳ್ಳಿಯ ನಗರಸಭೆ ಸದಸ್ಯರ ಪುತ್ರಿ ನೇಹಾ ಹಿರೇಮಠ ಅವರನ್ನು ಕಿಡಿಗೇಡಿಯೊಬ್ಬ ಹಾಡಹಗಲೇ ಚಾಕುವಿನಿಂದ ಇರಿದು ಕೊಂದಿದ್ದಾನೆ. ಹಿಂದುಗಳ ಮೇಲೆ ಪದೇ ಪದೆ ನಡೆಯುತ್ತಿರುವ ದಾಳಿಗಳು ರಾಜ್ಯದ ಜನರಲ್ಲಿ ಅನುಮಾನ ಮೂಡಿಸುತ್ತಿವೆ. ಡಿ.ಕೆ.ಸುರೇಶ್ ಸಭೆಯಲ್ಲಿ ಅವರ ಪಕ್ಷದ ಕಾರ್ಯಕರ್ತನೊಬ್ಬ ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾನೆ. ಮಗಳನ್ನು ಕಳೆದುಕೊಂಡವರನ್ನು ಸಂತೈಸಬೇಕಾದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಗಳು ಘಟನೆಯನ್ನು ತಿರುಚಿ ದುಃಖದಲ್ಲಿರುವ ಕುಟುಂಬವನ್ನು ಘಾಸಿಗೊಳಿಸಿದ್ದಾರೆ. ಮತದಾರರು ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಸರಿಯಾದ ಪಾಠ ಕಲಿಸಬೇಕು ಎಂದು ಹೇಳಿದರು.
10 ತಿಂಗಳ ಕಾಂಗ್ರೆಸ್ ಆಡಳಿತದಲ್ಲಿ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಸರ್ಕಾರ ವಿದ್ಯುತ್, ಆಸ್ತಿ ನೋಂದಣಿ ಶುಲ್ಕ ಹಾಗೂ ಮದ್ಯದ ಬೆಲೆ ಏರಿಸಿದೆ. ಮನೆಯ ಗೃಹಿಣೆಗೆ 2 ಸಾವಿರ ರೂಪಾಯಿ ಕೊಟ್ಟು ಒಂದು ಕುಟುಂಬದಿಂದ ಸರಾಸರಿ 4 ಸಾವಿರ ರೂ.ವಸೂಲಿ ಮಾಡುತ್ತಿದೆ. ಚುನಾವಣೆ ನಂತರ ಮುಖ್ಯಮಂತ್ರಿ ಖುರ್ಚಿ ಮೇಲೆ ಡಿ.ಕೆ.ಶಿವಕುಮಾರ್ ಟವೆಲ್ ಹಾಕಲಿದ್ದು ಅಧಿಕಾರಕ್ಕಾಗಿ ಗುಂಪುಗಾರಿಕೆ ಹೆಚ್ಚಾಗುತ್ತದೆ ಎಂದರು.

ಪ್ರಸಾದ್ ಕಾಂಗ್ರೆಸ್ ಬೆಂಬಲಿಸಿಲ್ಲ: 7 ವರ್ಷದ ಹಿಂದೆ ವಿ.ಶ್ರೀನಿವಾಸ ಪ್ರಸಾದ್ ಅವರನ್ನು ಸಚಿವ ಸಂಪುಟದಿಂದ ಕಿತ್ತೊಗೆದವರು, ಚುನಾವಣಾ ಸಂದರ್ಭದಲ್ಲಿ ಆರೋಗ್ಯ ವಿಚಾರಿಸುವ ನೆಪದಲ್ಲಿ ಪ್ರಸಾದ್ ಅವರ ಮನೆಗೆ ಎಡತಾಕುತ್ತಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದ ಮೈಸೂರಿನ ಸಮಾವೇಶಕ್ಕೆ ಶ್ರೀನಿವಾಸ ಪ್ರಸಾದ್ ಅನಾರೋಗ್ಯದ ಕಾರಣದಿಂದ ಪಾಲುಗೊಳ್ಳಲು ಸಾಧ್ಯವಾಗಲಿಲ್ಲ. ಈಗ ಶ್ರೀನಿವಾಸ ಪ್ರಸಾದ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾಂಗ್ರೆಸ್‌ನವರು ಪ್ರಸಾದ್ ಅವರ ಬೆಂಬಲ ಪಡೆದಿರುವುದಾಗಿ ಅಪಪ್ರಚಾರ ಮಾಡುವುದನ್ನು ನಿಲ್ಲಿಸಬೇಕು ಎಂದು ಹೇಳಿದರು.


10 ವರ್ಷಗಳಲ್ಲಿ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಉತ್ತಮ ಆಡಳಿತ ನೀಡಿದ್ದು, ಹತ್ತು ಹಲವು ಜನೋಪಯೋಗಿ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ದೇಶದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಬಿಜೆಪಿ ಅಭ್ಯರ್ಥಿ ಬಾಲರಾಜ್ ಅವರಿಗೆ ಹೆಚ್ಚಿನ ಮತ ನೀಡಿ ಜಯಶೀಲರನ್ನಾಗಿ ಮಾಡುವ ಮೂಲಕ ಕೇಂದ್ರದ ನರೇಂದ್ರ ಮೋದಿ ಸರ್ಕಾರಕ್ಕೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಕೆಂಡಗಣ್ಣಪ್ಪ, ಮುಖಂಡರಾದ ಚಿಕ್ಕರಂಗನಾಯ್ಕ, ಹೊರಳವಾಡಿ ಮಹೇಶ್, ಬದನವಾಳು ಮಹೇಶ್, ಮಸಗೆರಾಜು, ಕಳಲೆ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ, ಹುಲ್ಲಹಳ್ಳಿ ಶಿವಣ್ಣ, ಸಿದ್ದರಾಜು, ಹೆಮ್ಮರಗಾಲ ಶಿವಣ್ಣ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net