

ಹುಬ್ಬಳ್ಳಿ: ಕರ್ನಾಟಕದಲ್ಲಿ ಅರಾಜಕತೆ ಆಡಳಿತ ಶುರುವಾಗಿದೆ. ಆಡಳಿತ ನರ್ವಹಣೆ, ಕಾನೂನು ಸುವ್ಯವಸ್ಥೆ ಜನಜೀವನ ಸುಲಲಿತ ಮಾಡುವಲ್ಲಿ ಸಂಪೂರ್ಣ ಕುಸಿದು ಹೋಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಆರೋಪಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ತನ್ನ ತಪ್ಪುಗಳನ್ನ ಮುಚ್ಚಿಕೊಳ್ಳುವ ಉದ್ದೇಶದಿಂದ ವಿಷಯಾಂತರ ಮಾಡುತ್ತಿದೆ. ಶಾಸಕ ರವಿ ಗಾಣಿಗ ಅವರ ಆರೋಪ ಸತ್ಯಕ್ಕೆ ದೂರವಾದದು. ಯಾರು ಆಫರ್ ಕೊಟ್ಟಿದ್ದಾರೆ? ಅಡ್ವಾನ್ಸ್ ಎಷ್ಟು ಕೊಟ್ಟಿದ್ದಾರೆ? ಎನ್ನುವುದನ್ನು ದೇಶದ ಜನರ ಮುಂದೆ ರವಿ ಗಾಣಿಗ ತಿಳಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿ ಇಂತಹ ಯಾವುದೇ ಪ್ರಯತ್ನ ಮಾಡಿಲ್ಲ. ರವಿ ಗಾಣಿಗ ಅವರು ಬಿಜೆಪಿಯ ದೊಡ್ಡ ನಾಯಕರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ರವಿ ಗಾಣಿಗ ಅವರು ಬಿಜೆಪಿ ಆಫರ್ ನೀಡಿರುವ ಬಗ್ಗೆ ಸ್ಪಷ್ಟಪಡಿಸಬೇಕು. ಇಲ್ಲವಾದಲ್ಲಿ ಕಾಂಗ್ರೆಸ್ ಶಾಸಕರು ಬಾಯಿ ಮುಚ್ಚಿಕೊಂಡು ಬಿದ್ದಿರಬೇಕು ಎಂದು ತರಾಟೆಗೆ ತೆಗೆದುಕೊಂಡರು.
ಉಡುಪಿಯಲ್ಲಿ ಸಾಮೂಹಿಕ ಅತ್ಯಾಚಾರ ಘಟನೆ ನಡೆಯಿತು. ಗೃಹ ಸಚಿವರು ಸಾಮೂಹಿಕ ಅತ್ಯಾಚಾರ ಅಲ್ಲವೆಂದರು. ನಂಜನಗೂಡಿನಲ್ಲಿ ದಲಿತ ಹೆಣ್ಣುಮಗಳ ಶವ ನೇತಾಡಿದರೂ ದಲಿತರಿಗೆ ರಕ್ಷಣೆ ಸಿಗುತ್ತಿಲ್ಲ. ದಲಿತರನ್ನು ರಕ್ಷಣೆ ಮಾಡುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳು ಸಮರ್ಪಕವಾಗಿ ಜನರಿಗೆ ತಲುಪುತ್ತಿಲ್ಲ. ಕಳೆದ ಬಾರಿ 3 ಲಕ್ಷ 21 ಸಾವಿರ ಕೋಟಿ ರೂ. ಬಜೆಟ್ ಮಂಡನೆ ಮಾಡಿದ್ದರು. ಈ ಹಣ ಎಲ್ಲಿಗೆ ಹೋಯಿತು? ಈವರೆಗೂ ಯಾವ ಶಾಸಕರಿಗೂ ಅನುದಾನ ಪಡೆಯಲು ಸಾಧ್ಯವಾಗುತ್ತಿಲ್ಲ. ರಾಜ್ಯ ಸರ್ಕಾರ ಹಣದ ಮೂಟೆ ಲೂಟಿ ಮಾಡಿ ಹೈಕಮಾಂಡ್‌ಗೆ ಕಳುಹಿಸುವಲ್ಲಿ ನಿರತವಾಗಿದೆ. ರಾಜ್ಯದ ಅಭಿವೃದ್ಧ ಮಾಡಲು ಸಾಧ್ಯವಾಗದೇ ಈ ರೀತಿ ವಿಷಯಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಉಪನಗರ ಠಾಣೆಗೆ ದೂರು: ಶಾಸಕ ರವಿ ಗಾಣಿಗ ಅವರು ಕಾನೂನು ಬಾಹಿರವಾಗಿ ಬಿಜೆಪಿ ನಾಯಕರ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ ಭ್ರಷ್ಟಾಚಾರ ಕಾಯ್ದೆ ಉಲ್ಲಂಘಿಸಿದ್ದಾರೆ. ರವಿ ಗಾಣಿಗ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ ಅವರು ಬಿಜೆಪಿ ಕಾರ್ಯಕರ್ತರ ನೇತೃತ್ವದಲ್ಲಿ ಹುಬ್ಬಳ್ಳಿಯ ಉಪ ನಗರ ಠಾಣೆಗೆ ದೂರು ಸಲ್ಲಿಸಿದರು.