

ಹುಬ್ಬಳ್ಳಿ: ವೀರ, ಧೀರ, ನಿಸ್ವಾರ್ಥ ಸೇವೆ ಹಾಗೂ ಕರ್ತವ್ಯ ನಿಷ್ಠೆ ತೋರಿದ ಪೊಲೀಸರನ್ನು ನೆನೆಯುವ ನಿಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನವನ್ನು ಆಚರಿಸಲಾಗುತ್ತಿದೆ. ಈ ವೇಳೆ ನಿವೃತ್ತ ಪೊಲೀಸ್ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವ ಕೆಲಸ ನಡೆಯುತ್ತಿದೆ. ಬೇರೆ ಬೇರೆ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸ್ ಇಲಾಖೆ ಅತ್ಯಂತ ಶಿಸ್ತಿನಿಂದ ಕೂಡಿದೆ. ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದರಲ್ಲಿ ಪೊಲೀಸರು ಬಹಳ ಪ್ರಮುಖ ಪಾತ್ರವಹಿಸಿರುತ್ತಾರೆ ಎಂದು ನಿವೃತ್ತ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಎಸ್.ಎಲ್. ಕಸ್ತೂರಿ ಹೇಳಿದರು.
ಇಲ್ಲಿಯ ಗೋಕುಲ ರಸ್ತೆಯ ಹೊಸ ಸಶಸ್ತ್ರ ಮೀಸಲು ಪಡೆಯ ಕವಾಯತು ಮೈದಾನದಲ್ಲಿ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತಾಲಯದಿಂದ ಮಂಗಳವಾರ ಏರ್ಪಡಿಸಿದ್ದ ಪೊಲೀಸ್ ಧ್ಜಜ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪೊಲೀಸ್ ಇಲಾಖೆಯ ಉನ್ನತ ಅಧಿಕಾರಿಗಳ ಸಹಕಾರ ಹಾಗೂ ಮಾರ್ಗದರ್ಶನದಿಂದ ಉತ್ತಮ ಸೇವೆ ಸಲ್ಲಿಸಬಹುದು. ನಾವು ನಮ್ಮ ಕರ್ತವ್ಯದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಜನಸ್ನೇಹಿ ಪೊಲೀಸರಾಗಿ ಕರ್ತವ್ಯ ನಿರ್ವಹಿಸುವುದು ಹೆಮ್ಮೆಯ ವಿಷಯ. ಇಂತಹ ಇಲಾಖೆಯಲ್ಲಿ ದಿನದ 24 ಗಂಟೆ ತಾಸು ಒತ್ತಡದಲ್ಲಿ ಸೇವೆ ಸಲ್ಲಿಸುತ್ತಿರುತ್ತೇವೆ. ಹೀಗಾಗಿ ನಮ್ಮ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ಅಲ್ಲದೇ ಕುಟುಂಬ ವರ್ಗದವರಿಗೆ ಸಮಯ ಮೀಸಲಿಡಬೇಕು. ಕೆಲ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ಕರ್ತವ್ಯ ನಿರ್ವಹಣೆ ಮಾಡಬೇಕಾಗಿರುತ್ತದೆ. ಅಧಿಕಾರಿಗಳು ಹಾಗೂ ನಿವೃತ್ತ ಸಿಬ್ಬಂದಿ ಕುಂದುಕೊರತೆ ಹಾಗೂ ಸಮಸ್ಯೆ ಬಗ್ಗೆ ಹುಬ್ಬಳ್ಳಿ -ಧಾರವಾಡ ಪೊಲೀಸ್ ಆಯುಕ್ತಾಲಯ ಘಟಕ ಸ್ಪಂದಿಸುತ್ತ ಬಂದಿದೆ ಎಂದರು.
ಹು-ಧಾ ಪೊಲೀಸ್ ಆಯುಕ್ತೆ ರೇಣುಕಾ ಸುಕುಮಾರ ಮಾತನಾಡಿ, ಕಳೆದ ಬಾರಿ 33 ಲಕ್ಷ 50 ಸಾವಿರ ರೂ. ಮೌಲ್ಯದ ಪೊಲೀಸ್ ಧ್ವಜಗಳನ್ನು ಹಂಚಿಕೆ ಮಾಡಲಾಗಿದ್ದು, ಈ ಸಲ ಹೆಚ್ಚಿನ ಮೊತ್ತದ ಹಣ ಸಂಗ್ರಹಣೆಗೆ ಅಧಿಕಾರಿಗಳು ಮುತುವರ್ಜಿ ವಹಿಸಬೇಕು. 2023-24ರಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಗಳ ಕಲ್ಯಾಣ ನಿಧಿ ಸಮಿತಿ ಸಭೆ ಮಾಡಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೈದ್ಯಕೀಯ ವೆಚ್ಚಕ್ಕಾಗಿ ಸಹಾಯಧನವನ್ನು 5 ಲಕ್ಷ 18 ಸಾವಿರ ರೂ. ಹಾಗೂ ನಿಧನ ಹೊಂದಿದ ನಿವೃತ್ತ ಅಧಿಕಾರಿ ಹಾಗೂ ಸಿಬ್ಬಂದಿ ಅಂತ್ಯ ಸಂಸ್ಕಾರಕ್ಕಾಗಿ 1 ಲಕ್ಷದ 20 ರೂ. ಸಾವಿರ ಧನ ಸಹಾಯ ಮಂಜೂರು ಮಾಡಲಾಗಿದೆ. ಆರೋಗ್ಯ ಭಾಗ್ಯ ಯೋಜನೆಯಡಿ ಏಪ್ರಿಲ್ 2023ರಿಂದ ಮಾರ್ಚ್ 2024ರವರೆಗೆ ಒಟ್ಟು 652 ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಅರ್ಹ ಕುಟುಂಬದ ಸದಸ್ಯರು ವೈದ್ಯಕೀಯ ಸೌಲಭ್ಯ ಪಡೆದಿದ್ದಾರೆ. 2023-24ರಲ್ಲಿ ಪೊಲೀಸರ ಮಕ್ಕಳ ಎಸ್‌ಎಸ್‌ಎಲ್‌ಸಿ ಹಾಗೂ ನಂತರದ ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ 15 ಲಕ್ಷ 7 ಸಾವಿರ ರೂ. ಮೊತ್ತದ ಶೈಕ್ಷಣಿಕ ಸಹಾಯ ಧನ ಒದಗಿಸಲಾಗಿದೆ. ಸೇವೆಯಿಂದ ವಯೋನಿವೃತ್ತಿ ಹೊಂದಿದ 42 ಸಿಬ್ಬಂದಿಗೆ ತಲಾ 5 ಸಾವಿರ ರೂ. ವೆಚ್ಚದಲ್ಲಿ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಿ ಸನ್ಮಾನಿಸಲಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಸಂಘದಲ್ಲಿ ಇಲ್ಲಿಯವರೆಗೆ 370 ಜನರು ಸದಸ್ಯರಾಗಿದ್ದಾರೆ. ನಿವೃತ್ತ ಪೊಲೀಸ್ ಸಿಬ್ಬಂದಿಗೆ ಆರೋಗ್ಯ ಯೋಜನೆ ಬಗ್ಗೆ ಅರಿವು ಮೂಡಿಸಬೇಕಿದೆ. ಅಲ್ಲದೇ ಸಂಘದ ಸದಸ್ಯರಾಗಲು ಪ್ರೇರಣೆ ನೀಡಬೇಕು. ಪೊಲೀಸ್ ಧ್ವಜ ಮಾರಾಟದಿಂದ ಬಂದ ಹಣವನ್ನು ನಿವೃತ್ತ ಪೊಲೀಸ ಅಧಿಕಾರಿಗಳು, ಸಿಬ್ಬಂದಿ ಹಾಗೂ ಕುಟುಂಬದವರ ಶ್ರೇಯೋಭಿವೃದ್ಧಿಗೆ ವ್ಯಯಿಸಲಾಗುವುದು ಎಂದರು.
ಮಾರುತಿ ಹೆಗಡೆ ಅವರ ನೇತೃತ್ವದಲ್ಲಿ ವಿವಿಧ ಪಡೆಗಳು ಆಕರ್ಷಕ ಪಥ ಸಂಚಲನ ನಡೆಸಿದವು.
ಡಿಸಿಪಿ ಯಲ್ಲಪ್ಪ ಕಾಶಪ್ಪನವರ, ಎಸಿಪಿಗಳಾದ ಆರ್.ಕೆ. ಪಾಟೀಲ, ವಿಜಯಕುಮಾರ ತಳವಾರ, ನಿವೃತ್ತ ಡಿಐಜಿಪಿ ರವಿಕುಮಾರ ನಾಯಕ, ನಿವೃತ್ತ ಡಿಸಿಪಿ ಎಚ್.ಎ. ದೇವರಹೊರು, ನಿವೃತ್ತ ಡಿಎಸ್‌ಪಿಗಳಾದ ಆರ್.ಐ. ಅಂಗಡಿ, ಪ್ರಭುದೇವ ಮಾನೆ, ಶಿವಶಂಕರ ಗಡಾದಿ, ವಿ.ಬಿ. ಬೆಳವಡಿ, ನಿವೃತ್ತ ಪಿಐ ಅರುಣಕುಮಾರ ಸಾಳುಂಕೆ, ನಿವೃತ್ತ ಪಿಎಸ್‌ಐ ಆರ್.ಬಿ. ನೀರಲಗಿ, ಎಸ್.ಎನ್. ಬಾಳಿಕಾಯಿ, ವಿ.ಎಸ್. ಅಂಗಡಿ, ಇತರರು ಪಾಲ್ಗೊಂಡಿದ್ದರು.
ಡಿಸಿಪಿ ಎಂ. ರಾಜೀವ ಸ್ವಾಗತಿಸಿದರು. ಪೊಲೀಸ್ ಇನ್‌ಸ್ಪೆಕ್ಟರ್ ಮಾರುತಿ ಗುಳ್ಳಾರಿ ನಿರೂಪಿಸಿದರು. ಡಿಸಿಪಿ ಸಿ.ಆರ್. ರವೀಶ ವಂದಿಸಿದರು.