ಕಾಂಗ್ರೆಸ್ ಅಭಯದಿಂದ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ

PRALHAD JOSHI
Published on

ಹುಬ್ಬಳ್ಳಿ : ಕಾಂಗ್ರೆಸ್ ಸರ್ಕಾರ ತಮ್ಮನ್ನು ರಕ್ಷಣೆ ಮಾಡುತ್ತದೆ ಎಂಬ ಕಾರಣಕ್ಕೆ ಒಂದು ವರ್ಗ ಕಾನೂನು ಸುವ್ಯವಸ್ಥೆ ಹದಗೆಡಿಸುವ ಕೃತ್ಯ ಎಸಗುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಹಿಂದು ಕಾರ್ಯಕರ್ತರ ಕೊಲೆ ಹಾಗೂ ಗಲಭೆಗಳು ನಡೆಯುತ್ತವೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಂಗಳೂರಿನಲ್ಲಿ ಅತಿ ಹೆಚ್ಚು ಕೋಮು ಪ್ರಚೋದಕ ಕೊಲೆ ಪ್ರಕರಣಗಳು ನಡೆದಿರುವುದು ಕಾಂಗ್ರೆಸ್ ಅಧಿಕಾರದ ಅವಧಿಯಲ್ಲಿಯೇ. ಗಲಭೆ ನಡೆಸಿದವರ ವಿರುದ್ಧ ದಾಖಲಾಗಿರುವ ಪ್ರಕರಣಗಳನ್ನು ಸಹ ಕಾಂಗ್ರೆಸ್ ಸರ್ಕಾರದಲ್ಲಿಯೇ ರದ್ದು ಪಡಿಸಲಾಗುತ್ತದೆ. ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲೆಸೆದ ಪ್ರಕರಣವೇ ಇದಕ್ಕೆ ನಿದರ್ಶನ. ತಾವು ಏನೇ ಮಾಡಿದರೂ, ಕಾಂಗ್ರೆಸ್ ತಮಗೆ ರಕ್ಷಣೆ ಒದಗಿಸುತ್ತದೆ ಎಂಬ ಒಂದು ವರ್ಗದ ಜನರ ಭಾವನೆಯೇ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಲು ಪ್ರಮುಖ ಕಾರಣ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹದಾಯಿ ಜಲವಿವಾದ 1970ರಿಂದಲೂ ಇದೆ. ಸೋನಿಯಾ ಗಾಂಧಿ ಅವರು ಕರ್ನಾಟಕಕ್ಕೆ ಮಹದಾಯಿ ನೀರು ಬಿಡುವುದಿಲ್ಲವೆಂದಿದ್ದನ್ನು ಕಾಂಗ್ರೆಸ್​ನವರು ಮರೆತಿದ್ದಾರೆ ಎನಿಸುತ್ತದೆ. ಈ ವಿವಾದವನ್ನು ಸುಪ್ರಿಂ ಕೋರ್ಟ್​ಗೆ ತೆಗೆದುಕೊಂಡು ಹೋಗಿದ್ದೇ ಕಾಂಗ್ರೆಸ್​ನವರು ಎಂದು ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net