

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ: ಗದಗದಲ್ಲಿ ಒಂದೇ ಕುಟುಂಬದ ನಾಲ್ವರ ಹತ್ಯೆ, ಹುಬ್ಬಳ್ಳಿಯಲ್ಲಿ ವಿದ್ಯಾರ್ಥಿನಿಯ ಕೊಲೆಯಂಥ ಘಟನೆಗಳು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಶಿಥಿಲಗೊಂಡಿರುವುದನ್ನು ಸೂಚಿಸುತ್ತದೆ. ರಾಜ್ಯ ಕಾಂಗ್ರೆಸ್ ಸರ್ಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಹುಬ್ಬಳ್ಳಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗದಗ ಮತ್ತು ಹುಬ್ಬಳ್ಳಿಯ ಘಟನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ. ಪಿಐ, ಎಸಿಪಿ ಹುದ್ದೆಯ ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ದೊಡ್ಡ ಮೊತ್ತದ ಹಣದ ವ್ಯವಹಾರ ನಡೆದಿರುವಾಗ ಅವರು ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸಲು ಹೇಗೆ ಸಾಧ್ಯ? ವರ್ಗಾವಣೆಗೆ ಕೊಟ್ಟ ಹಣವನ್ನು ವಾಪಸ್ ಗಳಿಸಲು ಪೊಲೀಸ್ರು ವ್ಯವಸ್ಥೆಯ ಜತೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇದರಿಂದ ಸಮಾಜಘಾತುಕ ಶಕ್ತಿಗಳು ಬೆಳೆಯುತ್ತವೆ. ಸಹಜವಾಗಿ ಕಾನೂನು ಸುವ್ಯವಸ್ಥೆ ಹದಗೆಡುತ್ತದೆ ಎಂದರು.
ಪೊಲೀಸ್ರಿಗೆ ಮುಕ್ತವಾಗಿ ಸ್ವಾತಂತ್ರ್ಯ ಕೊಟ್ಟರೆ ಸಮಾಜಘಾತುಕ ಶಕ್ತಿಗಳನ್ನು ಹೇಗೆ ನಿಮೂಲನೆ ಮಾಡಬಹುದು ಎಂಬುದಕ್ಕೆ ಜಮ್ಮು ಕಾಶ್ಮೀರ ರಾಜ್ಯ ಬಹಳ ದೊಡ್ಡ ಉದಾಹರಣೆಯಾಗಿದೆ. ಅಲ್ಲಿಯ ಪೊಲೀಸ್ರು ಭಯೋತ್ಪಾದಕರು, ಸಮಾಜಘಾತುಕ ಶಕ್ತಿಗಳನ್ನು ನಿಯಂತ್ರಿಸಿದ್ದಾರೆ. ಸಣ್ಣ-ಪುಟ್ಟ ಘಟನೆಗಳನ್ನು ಹೊರತು ಪಡಿಸಿದರೆ ಜಮ್ಮು ಕಾಶ್ಮೀರದಲ್ಲಿ ಇಂದು ಶಾಂತಿ-ಸುವ್ಯವಸ್ಥೆ ನೆಲೆಸಿದೆ ಎಂದು ಹೇಳಿದರು.