

ಬೆಂಗಳೂರು: ಅತಿಯಾದ ಬಡ್ಡಿದರ ಹಾಗೂ ಕಾನೂನು ನಿಬಂಧನೆಗೆ ವಿರುದ್ಧವಾಗಿ ಸಾಲಗಾರರನ್ನು ಸಂಕಷ್ಟಕ್ಕೆ ದೂಡುತ್ತಿರುವ ಎಲ್ಲ ಬಗೆಯ ಬ್ಯಾಂಕ್‌ಗಳ ಬಡ್ಡಿ ವಿಧಿಸುವಿಕೆಗೆ ಕಡಿವಾಣ ಹಾಕಲು ಕಾನೂನು ತಿದ್ದುಪಡಿ ತರುವಂತೆ ಅಖಿಲ ಭಾರತ ಸಾಲಗಾರರು ಮತ್ತು ರೈತರ ಒಕ್ಕೂಟ (ಎಐಎಫ್ಬಿಎಫ್) ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಶಾಸಕರ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನ ಪರಿಷತ್‌ನ ಮಾಜಿ ಸದಸ್ಯರೂ ಆದ ಒಕ್ಕೂಟದ ಅಧ್ಯಕ್ಷ ದಯಾನಂದ್ ರೆಡ್ಡಿ, ರಾಷ್ಟ್ರೀಕೃತ ಬ್ಯಾಂಕ್‌ಗಳು ಸೇರಿ ಖಾಸಗಿ ಹಣಕಾಸು ಕಂಪನಿಗಳು ಸಾಲಗಾರರ ಮೇಲೆ ಮಿತಿಮೀರಿದ ಬಡ್ಡಿ ಹಾಗೂ ಕಠಿಣ ಷರತ್ತುಗಳನ್ನು ವಿಧಿಸುತ್ತಿದೆ. ಇದರಿಂದ ಹೆಚ್ಚಿನ ಮಂದಿ ಸಾಲ ತೀರಿಸಲಾಗದೆ ಮನೆ-ಮಠಗಳನ್ನು ಕಳೆದುಕೊಂಡು ಬೀದಿಗೆ ಬೀಳುವಂತಾಗಿದೆ. ಅನೇಕ ಉದ್ದಿಮೆದಾರರ ಘಟಕಗಳು ಕಡಿಮೆ ಮೊತ್ತಕ್ಕೆ ಹರಾಜಾಗಿ ಬ್ಯಾಂಕ್‌ಗಳು ಲಾಭ ಮಾಡಿಕೊಳ್ಳುತ್ತಿವೆ. ಜನಸಾಮಾನ್ಯರ ವಿರೋಧಿಯಾಗಿರುವ ಬ್ಯಾಂಕ್‌ಗಳ ನಿಯಮಗಳಿಗೆ ತಿದ್ದುಪಡಿ ಮಾಡಬೇಕಿದೆ ಎಂದು ಆಗ್ರಹಿಸಿದರು.
ಪ್ರಸ್ತುತ ದೇಶದ 75 ಕೋಟಿ ಮಂದಿ ಸಾಲಗಾರರರು ಸಮಸ್ಯೆಗೆ ಒಳಗಾಗಿದ್ದಾರೆ. ನಿತ್ಯವೂ 48 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದು, ಹಲವು ಸಂಖ್ಯೆಯ ಘಟಕಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುತ್ತಿದೆ. ಸಾಲಗಾರರನ್ನು ಅಪರಾಧಿಯಂತೆ ಬ್ಯಾಂಕ್‌ಗಳು ಬಿಂಬಿಸುತ್ತಿದ್ದು, ಕೋರ್ಟ್‌ನಲ್ಲಿ ದಾವೆ ಹೂಡಿ ಉದ್ದಿಮೆದಾರರ ಸ್ವತ್ತುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದರೂ, ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು.
ವಿಶ್ವದಲ್ಲೇ ಅತ್ಯಧಿಕ ಬಡ್ಡಿದರ?:
ಭಾರತದ ಬ್ಯಾಂಕ್‌ಗಳು ವಿಶ್ವದಲ್ಲೇ ಅತ್ಯಧಿಕ ಪ್ರಮಾಣದ ಬಡ್ಡಿ ವಿಧಿಸುತ್ತಿರುವುದಕ್ಕೆ ಕುಖ್ಯಾತಿ ಹೊಂದಿದೆ. ಮುಂದುವರಿದ ದೇಶಗಳಲ್ಲಿ ಸಾಲದ ಮೇಲಿನ ಬಡ್ಡಿದರ ಸರಾಸರಿ ಶೇ.5ರಷ್ಟಿದ್ದರೆ, ಭಾರತದಲ್ಲಿ ಶೇ.16ರಷ್ಟಿದೆ. ಈ ಅಗಾಧ ವ್ಯತ್ಯಾಸದಿಂದ ವ್ಯಾಪಾರಿಗಳು, ರೈತರು ಹಾಗೂ ಯುವಜನರು ಹೊಸ ಉದ್ದಿಮೆ ಸ್ಥಾಪಿಸಿದರೂ, ಬಡ್ಡಿ ತೀರಿಸಲಾಗದೆ ಘಟಕಗಳನ್ನು ಮುಚ್ಚುವಂತಹ ಸ್ಥಿತಿ ಇದೆ. ಈ ಅಂಶವನ್ನು ಬ್ಯಾಂಕ್‌ಗಳು ಸರ್ಕಾರಕ್ಕೆ ಮರೆಮಾಚಿ ಸಾಲ ನೀಡಿಕೆ ವಿಷಯವನ್ನು ಮಾತ್ರ ತಿಳಿಸುತ್ತಿದೆ. ಸಾಲಗಾರರ ಘನತೆ ಹಾಗೂ ಭರವಸೆ ಕಸಿದುಕೊಳ್ಳುವ ಬದಲು ಅವರಲ್ಲಿ ವಿಶ್ವಾಸ ಮೂಡಿಸುವ ಉಪಕ್ರಮಗಳನ್ನು ತಕ್ಷಣವೇ ಕೈಗೊಳ್ಳಬೇಕಿದೆ ಎಂದು ದಯಾನಂದ್ ರೆಡ್ಡಿ ಪ್ರತಿಪಾದಿಸಿದರು.
ಸುದ್ದಿಗೋಷ್ಠಿಯಲ್ಲಿ ನಿವೃತ್ತ ನ್ಯಾಯಾಧೀಶ ಸಿ.ಆರ್. ಬೆನಕನಹಳ್ಳಿ, ಒಕ್ಕೂಟದ ನಿರ್ದೇಶಕರಾದ ಗಜರಾಜ್, ಭಾವೇಶ್, ಪರೇಶ್, ನಿತೇಶ್, ಎಸ್.ಅಗರವಾಲ್ ಹಾಜರಿದ್ದರು.
ರೆಪೋ ದರದ ಶೇ.25 ಬಡ್ಡಿ ಒಕೆ:
ಬ್ಯಾಂಕ್‌ಗಳು ಗರಿಷ್ಠ ಬಡ್ಡಿ ವಿಧಿಸುವ ವಿಚಾರದಲ್ಲಿ ಆರ್‌ಬಿಐ ನಿಯಮಗಳನ್ನು ಪಾಲಿಸುತ್ತಿಲ್ಲ. ಸಾಲದ ಪತ್ರಕ್ಕೆ ಸಹಿ ಹಾಕಿಸಿಕೊಳ್ಳುವಾಗ ಷರತ್ತುಗಳನ್ನು ಜನರಿಗೆ ತಿಳಿಸುವ ಕೆಲಸ ಆಗುತ್ತಿಲ್ಲ. ಒಂದು ಕಂತು ಪಾವತಿ ಮಾಡುವುದು ತಡವಾದರೂ, ದಿವಾಳಿತನ ಹಾಗೂ ದಿವಾಳಿತನ ಸಂಹಿತೆ (ಐಬಿಸಿ) ಅಸ್ತ್ರ ಪ್ರಯೋಗಿಸಲಾಗುತ್ತಿದೆ. ಇನ್ನೂ ಕೆಲ ಬ್ಯಾಂಕ್‌ಗಳು ಎನ್‌ಪಿಎ ನೆಪವೊಡ್ಡಿ ಅಡವಿಟ್ಟ ಆಸ್ತಿಗಳನ್ನು ಹರಾಜು ಹಾಕಲು ಅತ್ಯುತ್ಸಾಹ ತೋರಿಸುತ್ತಿವೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ರೆಪೋ ದರ ಆಧರಿಸಿ ಬಡ್ಡಿ ಮಿತಿಯನ್ನು ಶೇ.25ಕ್ಕೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದರು.
25ಕ್ಕೆ ಜಾಗೃತಿ ಸಮಾವೇಶ:
ಬ್ಯಾಂಕ್ ಬಡ್ಡಿ ದರದ ಭಾರದಿಂದಿ ನಲುಗುತ್ತಿರುವ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಸೆ.25ರಂದು ಬೆಂಗಳೂರಿನ ಎಫ್ಕೆಸಿಸಿಐ ಸಭಾಂಗಣದಲ್ಲಿ ರಾಜ್ಯ ಮಟ್ಟದ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ. ತಜ್ಞರು, ಉದ್ದಿಮೆದಾರರು, ಸಾಲದಿಂದ ಸಂತ್ರಸ್ಥರಾದವರೊಂದಿಗೆ ಚರ್ಚಿಸಿ ಕಾನೂನು ತಿದ್ದುಪಡಿಗೆ ಸಲಹೆಗಳನ್ನು ಕ್ರೋಡೀಕರಿಸಿ ಪ್ರಧಾನಿ, ಹಣಕಾಸು ಸಚಿವರು ಹಾಗೂ ಆರ್‌ಬಿಐ ಮುಖ್ಯಸ್ಥರಿಗೆ ವಿವರವಾದ ಪತ್ರ ಬರೆಯಲಾಗುವುದು ಎಂದು ದಯಾನಂದ್ ತಿಳಿಸಿದ್ದಾರೆ.
ಸರ್ಕಾರಕ್ಕೆ ಒಕ್ಕೂಟದ ಸಲಹೆಗಳಿವು:
* ಬಡ್ಡಿ ದರ ಇಳಿಸಿ ಉದ್ದಿಮೆದಾರರನ್ನು ಜಾಗತಿಕ ಮಟ್ಟದಲ್ಲಿ ಸ್ಪಧೆಗೆ ಅಣಿಗೊಳಿಸುವುದು
* ಲಿಕ್ವಿಡೇಷನ್ ಹೆಸರಿನಲ್ಲಿ ಸ್ವತ್ತುಗಳ ತಕ್ಷಣ ಹರಾಜು ತಡೆಗೆ ಐಬಿಸಿ ಕಾಯ್ದೆಗೆ ತಿದ್ದುಪಡಿ
* ಎನ್‌ಪಿಎ ಆದ ಅಡವಿಟ್ಟ ಆಸ್ತಿ ಹರಾಜು ಗಡುವನ್ನು 90ರಿಂದ 180 ದಿನಗಳಿಗೆ ಹೆಚ್ಚಳ
* ಸಾಲಗಾರರಿಗೆ 15 ದಿನದಲ್ಲಿ ಸಾಲ ಪತ್ರದ ಮಾಹಿತಿಯನ್ನು ಆರ್‌ಟಿಐ ವಿತರಣೆಗೆ ಅವಕಾಶ
* 10 ಕೋಟಿ ರೂ. ಮೊತ್ತದವರೆಗೆ ಕೊಲ್ಯಾಟರಲ್ ಹಾಗೂ ಪರ್ಸನಲ್ ಗ್ಯಾರಂಟಿಗೆ ಮನ್ನಣೆ
* ಎನ್‌ಪಿಎ ವಿಂಗಡಣೆ ಬಳಿಕ ಬಡ್ಡಿ/ವಸೂಲಾತಿ ಮೊತ್ತ ವಿಧಿಸುವ ಕ್ರಮಕ್ಕೆ ತಡೆ ಹಾಕುವುದು.
ಪ್ರಮುಖ ರಾಷ್ಟ್ರಗಳ ಬ್ಯಾಂಕ್ ಬಡ್ಡಿದರ ವಿವರ:
ದೇಶ ರೆಪೋ ದರ ಗರಿಷ್ಠ ಬಡ್ಡಿ
ಅಮೆರಿಕ ಶೇ. 4.33 ಶೇ. 7.5
ಚೀನಾ ಶೇ. 3.0 ಶೇ. 3.75
ಜರ್ಮನಿ ಶೇ. 2.5 ಶೇ. 3.94
ಜಪಾನ್ ಶೇ. 0.5 ಶೇ. 2.2
ಭಾರತ ಶೇ. 4.33 ಶೇ.16