

ಹುಬ್ಬಳ್ಳಿ: ವಾಣಿಜ್ಯಕ್ಕೆ ಸಂಬಂಧಿಸಿ ತ್ವರಿತವಾಗಿ ವಿಲೇ ಆಗುತ್ತಿರುವಂತೆಯೇ ಇತರ ಪ್ರಕರಣಗಳೂ ಶೀಘ್ರವಾಗಿ ಇತ್ಯರ್ಥಗೊಳಿಸಲು ನೀಲನಕ್ಷೆ ಸಿದ್ಧವಾಗಿದೆ. ಬರುವ ಅಧಿವೇಶನ ಇಲ್ಲವೇ ಬಜೆಟ್ ಅಧಿವೇಶನದಲ್ಲಿ ಸದನದಲ್ಲಿ ಮಂಡಿಸಿ ಒಪ್ಪಿಗೆ ಪಡೆಯಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿವಿಲ್ ಪ್ರೊಸಿಜರ್ ಕೋಡ್ ತಿದ್ದುಪಡಿ ಮಾಡಲು ರಾಜ್ಯ ಸರ್ಕಾರ ಹೆಜ್ಜೆ ಇಟ್ಟಿದೆ. ಶ್ರೀಸಾಮಾನ್ಯನ ಸಮಯ ಮತ್ತು ಹಣದ ಹೊರೆ ಕಡಿಮೆ ಮಾಡಲು ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದರು.
ತ್ವರತ ನ್ಯಾಯಾಲಯದಲ್ಲಿ ವಿಶೇಷ ಪ್ರಕರಣ ಮಾತ್ರ ನಡೆಯುತ್ತದೆ. ಆದರೆ, ನಾವು ತಿದ್ದುಪಡಿ ತರುವ ಕಾನೂನಿನಲ್ಲಿ ಎಲ್ಲವೂ ಬರುತ್ತದೆ. ಮನೆ ಬಾಗಿಲಿಗೆ ನ್ಯಾಯದಾನ ನೀಡುವ ಸಂಕಲ್ಪ ರಾಜ್ಯ ಸರ್ಕಾರದು. ಸಂವಿಧಾನದಲ್ಲಿ ಇದರ ಅವಕಾಶವಿದೆ. ಚಿಂತನೆ ನಡೆದಿದೆ ಎಂದರು.
ಸಹಿಸಿಕೊಳ್ಳಲು ಆಗುತ್ತಿಲ್ಲ: ಹಾಸನದಲ್ಲಿ ಕಾಂಗ್ರೆಸ್ ಮಾಡಿದ ಸಮಾವೇಶನ ನೋಡಿ ಬಿಜೆಪಿಯವರಿಗೆ ಸಂಕಟವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಅವರು ಗಟ್ಟಿಯಾಗಿ ಹೋಗುತ್ತಿರುವುದನ್ನು ನೋಡಿ ಸಹಿಸಿಕೊಳ್ಳಲು ಆಗುತ್ತಿಲ್ಲ. ಸಮಾಜ ಒಡೆಯಬೇಕೆಂಬ ಸಂಕಲ್ಪ ಮಾತ್ರ ಬಿಜೆಪಿಯವರು ತೊಟ್ಟಿದ್ದಾರೆ. ವಕ್ಫ್‌ಗೆ ಸಂಬಂಧಿಸಿ 2019ರಲ್ಲಿ ನೋಟಿಸ್ ಕೊಟ್ಟವರು ಯಾರು? ಇವತ್ತು ರೈತರ ನೆನಪಾಯಿತೇ? ನಿಮ್ಮಲ್ಲಿ (ಬಿಜೆಪಿ) ನೀವೇ ಬಡೆದಾಡುಕೊಳ್ಳುತ್ತಿದೀರಿ. ನಿಮಗೆ ಅಭಿವೃದ್ಧಿ ರಾಜ್ಯದ ಹಿತ ಚಿಂತನೆ ಇಲ್ಲ. ಚುನಾವಣೆ ವೇಳೆ ಮಹದಾಯಿ ನೆನಪಾಯಿತು. ಈಗ ಎಲ್ಲಿ? ದುರ್ದೈವದ ಸಂಗತಿ ಎಂದರು.
ಧಾರವಾಡ ಪಾಲಿಕೆ: ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಧಾರವಾಡ ಮಹಾನಗರ ಪಾಲಿಕೆ ಪ್ರತ್ಯೇಕಕ್ಕೆ ಸಂಬಂಧಿಸಿ ಚರ್ಚೆ ನಡೆಯಲಿದೆ. ಕ್ಯಾಬಿನೆಟ್‌ನಲ್ಲಿ ಈ ವಿಷಯ ತಂದು ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸೂಚಿಸಿದ್ದಾರೆ. ಡಿ. 12 ಅಥವಾ 13ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಯಲಿದೆ. ಇವಷ್ಟೇ ಅಲ್ಲ, ಉತ್ತರ ಕರ್ನಾಟಕ ಭಾಗದ ವಿಶೇಷ ಯೋಜನೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.