ಕಾನೂನು ಪಾಲನೆಯೇ ಧರ್ಮ

4 vikram 4
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಕಾನೂನು, ಶಾಸನಗಳನ್ನು ಬದ್ಧತೆಯಿಂದ ಪಾಲಿಸುವುದೇ ಧರ್ಮ ಎಂದು ರಾಜ್ಯ ಹೈಕೋರ್ಟ್​ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ ಅಭಿಪ್ರಾಯಪಟ್ಟರು.
ನಗರದ ವೈ.ಎಸ್​. ಪಾಟೀಲ ಸ್ಮಾರಕ ಟ್ರಸ್ಟ್​ ಆಶ್ರಯದಲ್ಲಿ ರಂಗಾಯಣ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಸಮಾರಂಭದಲ್ಲಿ ಪ್ರಜಾಪ್ರಭುತ್ವದಲ್ಲಿ ಕಾನೂನು ಪರಿಪಾಲನೆ ಕುರಿತು ಅವರು ಮಾತನಾಡಿದರು.
ಮಾನವ ಶತ ಶತಮಾನಗಳಿಂದಲೂ ನೀಚ ಮತ್ತು ಸ್ವಾರ್ಥ ಪ್ರವೃತ್ತಿಯವನೇ ಆಗಿದ್ದಾನೆ. ಆದ್ದರಿಂದಲೇ ಕಾನೂನು ದಂಡ ಪ್ರಕ್ರಿಯೆಗಳು ನಡಾವಳಿಯಲ್ಲಿ ಬಂದವು. ಯಾವ ರಾಜ ಧರ್ಮದಂತೆ ನಡೆಯುವುದಿಲ್ಲವೋ ಅವನ ಕೊಲೆ ಮಾಡುವ ಹಕ್ಕೂ ಪ್ರಜೆಗೆ ಇದೆ ಎಂದು ಉದಾಹರಣೆ ನೀಡಿ ಪ್ರತಿಪಾದಿಸಿದರು. ಚಿಂತನೆ ಮತ್ತು ಜ್ಞಾನ ವರ್ಧನೆ ಇಂದು ಅಗತ್ಯವಾಗಿದೆ ಎಂದರು.
ನಿವೃತ್ತ ನ್ಯಾಯಾಧೀಶ ಎಸ್​.ಎಚ್​ ಮಿಟ್ಟಲಕೋಡ ಮಾತನಾಡಿ, ಪ್ರಜಾಪ್ರಭುತ್ವದ ಯಶಸ್ಸಿಗೆ ನಾಗರಿಕರಲ್ಲಿ ಸತ್ಯದ ಆಚರಣೆಯಿಂದ ಜಯ ದೊರೆಯುತ್ತದೆ ಎಂಬ ಉಕ್ತಿಯಲ್ಲಿ ವಿಶ್ವಾಸ ಮೂಡಬೇಕಿದೆ ಎಂದರು.
ಡಾ. ಆನಂದ ಪಾಂಡುರಂಗಿ, ಮೋಹನ ಸಿದ್ಧಾಂತಿ, ಹೈಕೋರ್ಟ್​ ವಕೀಲರ ಸಂಘದ ಅಧ್ಯಕ್ಷ ವಿ.ಎಂ. ಶೀಲವಂತರ, ಸಂಜಯ ಪಾಟೀಲ, ಇತರರು ಇದ್ದರು.
ದಾಮೋದರ ಹೆಗಡೆ ಸ್ವಾಗತಿಸಿದರು. ಮನೋಜ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ನಂತರ ಸಂವಾದ ನಡೆಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net