ಕಟ್ಟಡ ನಿರ್ಮಾಣ ನಿಯಮಗಳ ಸರಳೀಕರಣ : ಸಚಿವ ದಿನೇಶ್ ಗುಂಡೂರಾವ್ ಮಾಹಿತಿ

New Project (1)
Published on

ಸುಳ್ಯ: ಮನೆ ನಿರ್ಮಾಣ ಸೇರಿದಂತೆ ವಿವಿಧ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ನೀಡುವಲ್ಲಿ ಉಂಟಾಗುತ್ತಿರುವ ಸಮಸ್ಯೆ ಪರಿಹರಿಸಲು ನಿಯಮಗಳನ್ನು ಸರಳೀಕರಿಸುವ ಬಗೆ ನಗರಾಭಿವೃದ್ಧಿ ಸಚಿವರೊಂದಿಗೆ ಚರ್ಚಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಬುಧವಾರ ಸುಳ್ಯದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿ ಮಾತನಾಡಿದರು. ನಿವೇಶನಗಳ ನೋಂದಣಿ, ನಕ್ಷೆ ಮಂಜೂರಾತಿ, ಖಾತೆ, 9/11, ಏಕ ನಿವೇಶನ ಸೇರಿದಂತೆ ಕಟ್ಟಡ ನಿರ್ಮಾಣ ಸಂದರ್ಭ ಹಲವಾರು ನಿಯಮ ಪಾಲಿಸಬೇಕಿರುವುದರಿಂದ ಸಾರ್ವಜನಿಕರಿಗೆ ಮನೆ ನಿರ್ಮಿಸಲು ವಿಳಂಬವಾಗುತ್ತಿರುವ ಬಗ್ಗೆ ಜನಪ್ರತಿನಿಧಿಗಳು, ಸಾರ್ವಜನಿಕರಿಂದ ಅಹವಾಲು ಬಂದಿದೆ. ನಗರವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ನಗರ ಯೋಜನಾ ಪ್ರಾಧಿಕಾರ ಅಗತ್ಯ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗಬಾರದು ಎಂಬುವುದು ಸರ್ಕಾರದ ಕಾಳಜಿ. ತ್ವರಿತವಾಗಿ ಮಂಜೂರಾತಿ ನೀಡುವ ಬಗ್ಗೆ ಸರ್ಕಾರ ಗಮನ ಹರಿಸಲಿದೆ. ನಿವೇಶನ ಮಂಜೂರಾತಿ ಸಂದರ್ಭದಲ್ಲಿ ಕಂದಾಯ ಮತ್ತು ಅರಣ್ಯ ಭೂಮಿ ಬಗ್ಗೆ ತಕರಾರು ಉದ್ಭವಿಸಿ ಪ್ರಕ್ರಿಯೆ ವಿಳಂಬವಾಗುತ್ತಿವೆ. ಕಂದಾಯ ಮತ್ತು ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ಕಾರ್ಯ ನಡೆಸಬೇಕೆಂದು ಸೂಚಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆ ವಹಿಸಿದ್ದರು. ನಪಂ ಅಧ್ಯಕ್ಷೆ ಶಶಿಕಲಾ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರದ ಅಧ್ಯಕ್ಷ ಭರತ್ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.

ಮಂಜೂರಾತಿ ಪತ್ರ ವಿತರಣೆ

ಅಭಿವೃದ್ಧಿ ಕಾಮಗಾರಿಗೆ ಚಾಲನೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ಪಂಚಾಯತ್ ರಾಜ್ ಇಂಜಿನಿಯರಿಂಗ್ ಉಪವಿಭಾಗದ ಕಚೇರಿ, ಸುಳ್ಯ ತಾಲೂಕು ಆಸ್ಪತ್ರೆ ಬ್ಲಾಕ್ ಪಬ್ಲಿಕ್ ಹೆಲ್ತ್ ಲ್ಯಾಬ್, ನೂತನ ಶವಗಾರ, ಸಾಮಾಜಿಕ ವಲಯ ಅರಣ್ಯಾಧಿಕಾರಿಗಳ ಕಚೇರಿ ಕಟ್ಟಡ, ಸುಳ್ಯ ನಗರ ಯೋಜನಾ ಪ್ರಾಧಿಕಾರ ಕಚೇರಿ ಮತ್ತಿತರ ಕಾಮಗಾರಿ ಉದ್ಘಾಟಿಸಿದರು. ಸಂಧ್ಯಾ ಸುರಕ್ಷಾ ಮತ್ತು ವೃದ್ಧಾಪ್ಯ ವೇತನ ಮಂಜೂರಾತಿ ಪತ್ರವನ್ನು ಫಲಾನುಭವಿಗಳಿಗೆ ವಿತರಿಸಿದರು. ಕಾಡಾನೆ ದಾಳಿಯಿಂದ ಸಂತ್ರಸ್ತ ರೈತರಿಗೆ ಪರಿಹಾರ ಮೊತ್ತ ಚೆಕ್ ವಿತರಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net