‘ಮನೆ ಮನೆಗೆ ಪೊಲೀಸ್’ ವಿನೂತನ ಕಾರ್ಯಕ್ರಮಕ್ಕೆ ಚಾಲನೆ, ಐಜಿಪಿ ಚೇತನಸಿಂಗ್ ರಾಥೋಡ್ ಹೇಳಿದ್ದೇನು ಗೊತ್ತಾ?

MANE MANE POLICE
ವಿಜಯಪುರ ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ನಡೆದ ಮನೆ ಮನೆಗೆ ಪೊಲೀಸ್ ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಥೋಡ್ ನೆರವೇರಿಸಿದರು. ಎಸ್‌ಪಿ ಲಕ್ಷ್ಮಣ ನಿಂಬರಗಿ, ಎಎಸ್‌ಪಿ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ ಮತ್ತಿತರರಿದ್ದಾರೆ.
Published on

ವಿಜಯಪುರ: ಪೊಲೀಸ್ ಮತ್ತು ಸಾರ್ವಜನಿಕರ ಮಧ್ಯೆ ಸಂಪರ್ಕ ಮತ್ತು ಸಂಬಂಧ ವೃದ್ಧಿ, ನೇರ ಸಂಪರ್ಕ ಮತ್ತು ಸಂವಹನ ಸ್ಥಾಪನೆ, ಸಾರ್ವಜನಿಕರ ಸಮಸ್ಯೆಗೆ ತಕ್ಷಣಕ್ಕೆ ಸ್ಪಂದನೆ, ಭದ್ರತೆ ಹಾಗೂ ಸುರಕ್ಷಿತ ವಾತಾವರಣ ನಿರ್ಮಾಣ, ಅಪರಾಧ ತಡೆ, ಸಮಾಜದಲ್ಲಿ ಶಾಂತಿ ನೆಲೆಸುವಂತೆ ಮಾಡುವುದು, ಭಯಮುಕ್ತ ವಾತಾವರಣ ಮತ್ತು ಕಾನೂನು ತಿಳಿವಳಿಕೆ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಕಾರ್ಯಕ್ರಮ ಆರಂಭಿಸಿದೆ.

ನಗರದ ಕಂದಗಲ್ಲ ಹನುಮಂತರಾಯ ರಂಗಮಂದಿರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಈ ‘ಮನೆ ಮನೆಗೆ ಪೊಲೀಸ್’ ಎಂಬ ವಿನೂತನ ಉಪಕ್ರಮಕ್ಕೆ ಚಾಲನೆ ನೀಡಿದ ಬೆಳಗಾವಿ ಉತ್ತರ ವಲಯದ ಐಜಿಪಿ ಚೇತನಸಿಂಗ್ ರಾಥೋಡ್ ಮಾತನಾಡಿ, ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಂಡು ಸಾರ್ವಜನಿಕರಲ್ಲಿ ಭದ್ರತೆ ಮತ್ತು ವಿಶ್ವಾಸವನ್ನುಂಟು ಮಾಡುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ದಿಟ್ಟ ಹೆಜ್ಜೆಯನ್ನಿರಿಸಿದೆ ಎಂದರು.

ಈ ನೂತನ ಕಾರ್ಯಕ್ರಮದ ಅಡಿಯಲ್ಲಿ ಬೀಟ್ ವ್ಯವಸ್ಥೆಯನ್ವಯ ವಿಂಗಡಿಸಲಾದ ಪ್ರದೇಶದಲ್ಲಿರುವ ಮನೆಗಳಲ್ಲಿ 40-50 ಮನೆಗಳ ಗುಂಪು ಮಾಡಿಕೊಂಡು ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ ಭೇಟಿ ನೀಡುತ್ತಾರೆ. ಅಪರಾಧಿಕ ಪ್ರಕರಣಗಳ ಕಡಿವಾಣ, ಸುರಕ್ಷತೆ, ಸೈಬರ್ ಅಪರಾಧಗಳ ಅರಿವು, ಪೊಲೀಸ್ ಇಲಾಖೆ ನೆರವು ಪಡೆಯುವ ವಿಧಾನ ಸೇರಿದಂತೆ ಪೊಲೀಸ್ ಇಲಾಖೆಯ ಸಮಗ್ರ ಸೇವೆಯ ಅರಿವು ಮೂಡಿಸುವ ಕಾರ್ಯಚಟುವಟಿಕೆಗಳನ್ನು ಈ ಯೋಜನೆ ಒಳಗೊಂಡಿದೆ ಎಂದರು.

ಅಪರಾಧಗಳ ಸ್ವರೂಪ ಈಗ ಡಿಜಿಟಲ್ ರೂಪ ಪಡೆದಿದೆ, ಡಿಜಿಟಲ್ ಅರೆಸ್ಟ್ ಮೂಲಕ ಹೆದರಿಸಿ ಹಣ ಕೀಳುವ, ಇಷ್ಟು ವಿಡಿಯೋ ಹಾಕಿದರೆ ಇಷ್ಟು ಹಣ ಕೊಡುತ್ತೇವೆ, ಮನೆಯಲ್ಲಿಯೇ ಕುಳಿತು ಹಣ ಗಳಿಸಿ ಎಂಬಿತ್ಯಾದಿ ಬಣ್ಣದ ಮಾತು ಹೇಳಿ ಅನೇಕ ರೀತಿಯಲ್ಲಿ ಮೋಸ ನಡೆಯುತ್ತಿದೆ. ಡಿಜಿಟಲ್ ಅರೆಸ್ಟ್ ಜಾಲಕ್ಕೆ ತೊಂದರೆ ಅನುಭವಿಸಿದ ದಂಪತಿ ಆತ್ಮಹತ್ಯೆ ಮಾಡಿಕೊಳ್ಳುವಂತಾಗಿತ್ತು, ಹೀಗಾಗಿ ಸಮಗ್ರ ಅರಿವು ಹೊಂದಿರಬೇಕಾಗಿರುವುದು ಅಗತ್ಯವಾಗಿದೆ. ಈ ಹಿಂದೆ ದೂರುದಾರರು ಸ್ಟೇಷನ್‌ಗೆ ಬಂದು ದೂರು ನೀಡಿದಾಗ ಅದನ್ನು ದಾಖಲಿಸಿ ಮುಂದಿನ ಕ್ರಮಕ್ಕೆ ಮುಂದಾಗುತ್ತಿದ್ದರು. ಈಗ ಆರಕ್ಷಕರು ಸಾರ್ವಜನಿಕರ ಮನೆಗೆ ಹೋಗಿ ಅಹವಾಲು ಆಲಿಸುವ ನಿಟ್ಟಿನಲ್ಲಿ ಪೊಲೀಸ್ ವ್ಯವಸ್ಥೆ ಸ್ನೇಹಮಯಿಯಾಗಿದೆ. ಪೊಲೀಸರು ಮನೆಗೆ ಬಂದಾಗ ಅವರೊಂದಿಗೆ ಆತ್ಮೀಯವಾಗಿ ಮಾತನಾಡಿ, ಅವರು ನಿಮ್ಮ ಸಹೋದ್ಯೋಗಿಗಳು ಎಂದು ತಿಳಿದು ಅವರ ಜೊತೆ ಮಾತನಾಡಿ ಎಂದರು.

ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ ನಿಂಬರಗಿ ಮಾತನಾಡಿ, ಸಮಾಜದ ಸುರಕ್ಷತೆ ಹಾಗೂ ಸ್ವಾಸ್ಥ್ಯ ಕಾಪಾಡುವಲ್ಲಿ ಆರಕ್ಷಕರ ಪಾತ್ರ ಪ್ರಮುಖವಾಗಿದೆ. ವೈದ್ಯರಂತೆ ಸಮಾಜದಲ್ಲಿ ಆಗಬಹುದಾದ ಅಪರಾಧಿಕ ಪ್ರಕರಣಗಳನ್ನು ತಡೆಗಟ್ಟಲು ಚಿಕಿತ್ಸೆ ನೀಡುತ್ತಾರೆ. ಜನಸಂಖ್ಯೆಗನುಗುಣವಾಗಿ ಪೊಲೀಸರ ಸಂಖ್ಯೆ ಕಡಿಮೆ, ಹೀಗಾಗಿ ಮಾಧ್ಯಮಗಳು, ಸಾರ್ವಜನಿಕರು ಪೊಲೀಸರ ಕಣ್ಣು ಹಾಗೂ ಕಿವಿಯಾಗಿ ಕಾರ್ಯನಿರ್ವಹಿಸುವ ಸಹಭಾಗಿತ್ವ ಅಗತ್ಯ ಎಂದರು.

ಎಎಸ್‌ಪಿಗಳಾದ ಶಂಕರ ಮಾರಿಹಾಳ, ರಾಮನಗೌಡ ಹಟ್ಟಿ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಟಿ.ಎಸ್. ಸುಲ್ಫಿ, ಮಲ್ಲಯ್ಯ ಮಠಪತಿ ಮತ್ತಿತರರಿದ್ದರು. ಸಿಪಿಐ ಮಲ್ಲಯ್ಯ ಮಠಪತಿ ಸ್ವಾಗತಿಸಿದರು. ಸಿಪಿಐ ರವಿ ಯಡವಣ್ಣವರ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net