

ಕೊಳ್ಳೇಗಾಲ: ಕ್ಷೇತ್ರ ವ್ಯಾಪ್ತಿಯಲ್ಲಿ 1 ಕೋಟಿ 22 ಲಕ್ಷ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭಾನುವಾರ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ತಾಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ಅರುಣೋದಯ ಚರ್ಚ್ ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ ರೂ. ವೆಚ್ಚದಲ್ಲಿ ಮುಂದುವರಿದ ಕಾಮಗಾರಿ ಮತ್ತು ಹೊಸ ಬಡಾವಣೆಯಲ್ಲಿ 6 ಲಕ್ಷ ರೂ. ವೆಚ್ಚದಲ್ಲಿ ಸಿ.ಸಿ ರಸ್ತೆ ನಿರ್ಮಾಣ, ಕುರುಬರ ಬೀದಿಯಲ್ಲಿ ವಿಶೇಷ ಅನುದಾನದಡಿ 10 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ - ಚರಂಡಿ ನಿರ್ಮಾಣ ಕಾಮಗಾರಿ, ಲಕ್ಕರಸನಪಾಳ್ಯ ಗ್ರಾಮದಲ್ಲಿ 20 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣ ಕಾಮಗಾರಿ, ತಿಮ್ಮರಾಜೀಪುರ ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಹಾಗೂ 20 ಲಕ್ಷ ರೂ. ವೆಚ್ಚದಲ್ಲಿ ಬಸವ ಭವನದ ಮುಂದುವರಿದ ಕಾಮಗಾರಿ, ಹಿತ್ತಲ ದೊಡ್ಡಿ ಗ್ರಾಮದಲ್ಲಿ 6 ಲಕ್ಷ ರೂ. ವೆಚ್ಚದ ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದರು.
ತಿಮ್ಮರಾಜೀಪುರ ಗ್ರಾಮದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಲವು ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ. ಇಲ್ಲಿವರೆಗಿನ ಅಧಿಕಾರಾವಧಿಯಲ್ಲಿ ಸಾಕಷ್ಟು ಅನುದಾನ ತಂದಿದ್ದೇನೆ. ಮುಖ್ಯವಾಗಿ ಎಲ್ಲ ಧರ್ಮದ ಎಲ್ಲ ವರ್ಗದ ಸಮುದಾಯ ಭವನ ನಿರ್ಮಾಣಕ್ಕೆ ಅನುದಾನ ನೀಡಿದ್ದೇನೆ ಎಂದರಲ್ಲದೆ, ಈ ಕಾಮಗಾರಿಗಳನ್ನು ಜರೂರಾಗಿ ಗುಣಮಟ್ಟದಲ್ಲಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತಿಮ್ಮರಾಜೀಪುರ ಗ್ರಾ.ಪಂ ವ್ಯಾಪ್ತಿಗೆ ಸುಮಾರು 4.30 ರೂ. ಕೋಟಿ ಅನುದಾನ ನೀಡಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಗ್ರಾ.ಪಂ ಅಧ್ಯಕ್ಷೆ ರಶ್ನಿ ರಾಜು ಅವರು ಆ ಮಾಹಿತಿಯ ಕರಪತ್ರವನ್ನು ಹಂಚಿದ್ದಾರೆ. ಕಾಂಗ್ರೆಸ್ ಸರ್ಕಾರ ಜನರ ಪರವಾಗಿ ಕೆಲಸ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳ ನಡುವೆಯೂ ರಾಜ್ಯದಲ್ಲಿ ಅಬಿವೃದ್ಧಿ ಕೆಲಸ ನಡೆಸಲಾಗುತ್ತಿದೆ. ಸಂಪನ್ಮೂಲವನ್ನು ಹೇಗೆ ಕ್ರೋಡೀಕರಿಸಿ ಅಭಿವೃದ್ಧಿ ಮಾಡಬಹುದು ಎಂಬುದನ್ನು ಸಿಎಂ ಸಿದ್ದರಾಮಯ್ಯ ಅವರು ದೇಶಕ್ಕೆ ತೋರಿಸಿದ್ದಾರೆ ಎಂದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಕಾಯ ನಿರ್ವಾಹಣಾಧಿಕಾರಿ ಗುರುಶಾಂತಪ್ಪ ಬೆಳ್ಳುಂಡಗಿ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮೋಳೆ, ತಿಮ್ಮರಾಜೀಪುರ ಗ್ರಾ.ಪಂ ಅಧ್ಯಕ್ಷೆ ರಶ್ಮಿ, ಉಪಾಧ್ಯಕ್ಷೆ ಸಹನಾಪ್ರೀಯ, ಸಿದ್ದಯ್ಯನಪುರ ಗ್ರಾಮ ಅಧ್ಯಕ್ಷೆ ಶಾಂತಮ್ಮ, ತಿಮ್ಮರಾಜೀಪುರ ಗ್ರಾ.ಪಂ ಮಾಜಿ ಅಧ್ಯಕ್ಷ ರಾಜು, ಸದಸ್ಯರು, ಪಿಡಿಒ ಶಿವಮೂರ್ತಿ, ಕೆಆರ್‌ಐಡಿಎಲ್ ಎಇಇ ಚಿಕ್ಕಲಿಂಗಯ್ಯ ಇದ್ದರು.