ಪುಣ್ಯ ಗಳಿಸಿಕೊಳ್ಳುವ ಕಲೆ ಹರಿಕಥೆ...

Putthige-1
Published on

ಸುಗುಣೇಂದ್ರ ತೀರ್ಥ ಶ್ರೀ ಆಶೀರ್ವಚನ

ಭಗವದ್ಗೀತಾ ಸರಣಿ ಮಾಲಿಕೆಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಹರಿಕಥೆಯೂ ಸಹ ಅಪೂರ್ವವಾದ ಕಲೆಯಾಗಿದ್ದು, ಧಾರ್ಮಿಕ ಪ್ರಸಾರದ ಪ್ರಮುಖ ಅಂಗವಾಗಿದೆ. ಇತ್ತೀಚೆಗೆ ಈ ಕಲೆ ನಶಿಸುತ್ತಿದ್ದು, ಬೆರಳೆಣಿಕೆಯಷ್ಟು ಜನ ಮಾತ್ರ ಹರಿಕಥೆ ಮಾಡುವವರಿದ್ದಾರೆ. ಪುಣ್ಯ ಗಳಿಕೆಯ ಈ ಕಲೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಉಡುಪಿ ಪರ್ಯಾಯ ಸುಗುಣೇಂದ್ರ ತೀರ್ಥ ಶ್ರೀಪಾದರು ನುಡಿದರು.

Putthige-2
ಉಡುಪಿಯ ಮಧ್ವ ಮಂಟಪದಲ್ಲಿ ರುಕ್ಮಿಣಿ ಹಂಡೆ ಭಗವದ್ಗೀತಾ ಹರಿಕಥೆ ನಡೆಸಿದರು.

ಕೋಟಿ ಗೀತಾ ಲೇಖನ ಯಜ್ಞದ ಮುಂದುವರಿದ ಭಾಗವಾಗಿ ನ.20ರಿಂದ ಮಧ್ವ ಮಂಟಪದಲ್ಲಿ ಆರಂಭಗೊಂಡಿರುವ ಬೃಹತ್​ ಗೀತೋತ್ಸವ ಕಾರ್ಯಕ್ರಮದಲ್ಲಿ ಹಂಡೆದಾಸ ಪ್ರತಿಷ್ಠಾನದ ಸಹಭಾಗಿತ್ವದಲ್ಲಿ ಸೋಮವಾರ ಆರಂಭಗೊಂಡ 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿಗೆ ಚಾಲನೆ ನೀಡಿ ಆಶೀರ್ವದಿಸಿದರು.

ಪಟ್ಟದ ಕಿರಿಯ ಶಿಷ್ಯ ಸುಶ್ರೀಂದ್ರ ತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು. ಪ್ರತಿಷ್ಠಾನದ ರಾಮಚಂದ್ರ ಉಪಾಧ್ಯಾಯ ಸ್ವಾಗತಿಸಿದರು. ಸಗ್ರಿ ವೇದವ್ಯಾಸ ಐತಾಳ್​ ವಂದಿಸಿದರು. ಮಧೂರು ಬಾಲಸುಬ್ರಹ್ಮಣ್ಯಂ, ಪ್ರಸನ್ನ ಆಚಾರ್ಯ, ರಮೇಶ್​ ಭಟ್​, ಉಪ್ಪೂರು ಭಾಗ್ಯಲಕ್ಷ್ಮೀ ಇತರರು ಉಪಸ್ಥಿತರಿದ್ದರು.

ಭಗವದ್ಗೀತೆ ಕುರಿತ ಹರಿಕಥೆಯ ಪ್ರಥಮ ಪ್ರಯೋಗ ಇದಾಗಿದೆ. ಕೃಷ್ಣನ ಸನ್ನಿಧಾನದಲ್ಲಿ ರುಕ್ಮಿಣಿ ಹಂಡೆ ಸರಣಿ ಮಾಲಿಕೆ ನಡೆಸಲಿದ್ದಾರೆ. ನಶಿಸುತ್ತಿರುವ ಈ ಕಲೆಯನ್ನು ಸಂರಕ್ಷಿಸುತ್ತಿರುವ ಅವರ ಕಾರ್ಯ, ಪ್ರಯತ್ನ ಅನುಕರಣೀಯ. ವಿಶ್ವಗೀತಾ ಪರ್ಯಾಯದಲ್ಲಿ ಹರಿಕಥೆ ನಡೆಯುತ್ತಿರುವುದು ಶ್ಲಾಘನೀಯ. | ಸುಗುಣೇಂದ್ರ ತೀರ್ಥ ಶ್ರೀಪಾದರು. ಪುತ್ತಿಗೆ ಮಠ, ಉಡುಪಿ

ರಾಜಾಂಗಣದಲ್ಲಿ ಭಗವದ್ಗೀತಾ ಪ್ರವಚನ

ಉಡುಪಿಯ ರಾಜಾಂಗಣದಲ್ಲಿ ನ.25ರಿಂದ ಡಿ.11ರ ವರೆಗೆ ಸಂಜೆ 6ರಿಂದ 7 ಗಂಟೆ ವರೆಗೆ ನಡೆಯಲಿರುವ ಭಗವದ್ಗೀತಾ ಪ್ರವಚನವನ್ನು ಪರ್ಯಾಯ ಸುಗುಣೇಂದ್ರ ಶ್ರೀ ಹಾಗೂ ಸುಶ್ರೀಂದ್ರ ಶ್ರೀ ಸೋಮವಾರ ಉದ್ಘಾಟಿಸಿದರು. ಕಾರ್ಯಕ್ರಮದ ಪ್ರಾಯೋಜಕ ಉದ್ಯಮಿ ಭುವನೇಂದ್ರ ಕಿದಿಯೂರ್​, ಡಾ. ರಮಾನಾಥ ಆಚಾರ್ಯ, ರಮೇಶ್​ ಭಟ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net