

ಹಾವೇರಿ: ಮಹಿಳೆಯರು ಹಾಗೂ ವಿದ್ಯಾರ್ಥಿನಿಯರಿಗೆ ‘ಶಕ್ತಿ’ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣ ಕಲ್ಪಿಸುವ ಯೋಜನೆಗೆ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಹಾಗೂ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ನಗರದ ಬಸ್ ನಿಲ್ದಾಣದಲ್ಲಿ ಜೂ. 11ರಂದು ಮಧ್ಯಾಹ್ನ 12.30ಕ್ಕೆ ಚಾಲನೆ ನೀಡಲಿದ್ದಾರೆ.
ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಶಿಗ್ಗಾಂವಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಶಿವಕುಮಾರ ಉದಾಸಿ, ವಿಧಾನ ಪರಿಷತ್ ಶಾಸಕರಾದ ಎಸ್.ವಿ. ಸಂಕನೂರ, ಪ್ರದೀಪ ಶೆಟ್ಟರ್, ಶಾಸಕರಾದ ಶ್ರೀನಿವಾಸ ಮಾನೆ, ವಿಧಾನ ಪರಿಷತ್ ಶಾಸಕರಾದ ಸಲೀಂ ಅಹ್ಮದ್, ಶಾಸಕರಾದ ಬಸವರಾಜ ಶಿವಣ್ಣನವರ, ಯು.ಬಿ. ಬಣಕಾರ ಹಾಗೂ ಪ್ರಕಾಶ ಕೋಳಿವಾಡ, ಇತರರು ಭಾಗವಹಿಸಲಿದ್ದಾರೆ. ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎಸ್.ವಿ. ಪ್ರಸಾದ, ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ವಾಕರಸಾ ಸಂಸ್ಥೆ ಹುಬ್ಬಳ್ಳಿ ಕೇಂದ್ರ ಕಚೇರಿ ವ್ಯವಸ್ಥಾಪಕ ನಿರ್ದೇಶಕ ಭರತ್.ಎಸ್. ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ, ಇತರರು ಪಾಲ್ಗೊಳ್ಳುವರು.
ಕಾರ್ಯಗತವಾಗುತ್ತಿರುವ ಮೊದಲ ಗ್ಯಾರಂಟಿ: ಕಾಂಗ್ರೆಸ್ ಪಕ್ಷ ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದ 5 ಗ್ಯಾರಂಟಿ ಯೋಜನೆಗಳಲ್ಲಿ ಕಾರ್ಯಗತವಾಗುತ್ತಿರುವ ಮೊದಲ ಯೋಜನೆ ಇದಾಗಿದೆ. ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲ ಜಿಲ್ಲೆಗಳಲ್ಲೂ ಶಕ್ತಿ ಯೋಜನೆ ಉದ್ಘಾಟನೆಗೊಳ್ಳುತ್ತಿದೆ. ಮಧ್ಯಾಹ್ನ 1 ಗಂಟೆ ನಂತರ ಮಹಿಳಾ ಪ್ರಯಾಣಿಕರಿಗೆ ಈ ಸೌಲಭ್ಯ ದೊರೆಯಲಿದೆ. ‘ಉಚಿತ ಪ್ರಯಾಣ’ ಯೋಜನೆಯು ಪ್ರತಿದಿನ 41.8 ಲಕ್ಷಕ್ಕೂ ಹೆಚ್ಚು ಮಹಿಳೆಯರಿಗೆ ಅನುಕೂಲವಾಗಲಿದೆ.
ಸೌಲಭ್ಯ ಪಡೆಯುವವರು ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿ ಶಕ್ತಿ ಸ್ಮಾರ್ಟ್ ಕಾರ್ಡ್‌ಗಳನ್ನು ಈ ಯೋಜನೆ ಪ್ರಾರಂಭವಾದ ಮೂರು ತಿಂಗಳ ಒಳಗಾಗಿ ಪಡೆದುಕೊಳ್ಳಬೇಕು. ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಸಂದರ್ಭದಲ್ಲಿ ಬಸ್‌ನಲ್ಲಿ ಶೂನ್ಯ ಮೊತ್ತದ ಟಿಕೆಟ್ ಅನ್ನು ನಿರ್ವಾಹಕರಿಂದ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಒಂದು ಪಕ್ಷ ಹೆಚ್ಚುವರಿ ಲಗೇಜ್ ಕೊಂಡೊಯ್ಯುತ್ತಿದ್ದಲ್ಲಿ ಅದಕ್ಕೆ ನಿಯಮಾನುಸಾರ ಲಗೇಜ್ ದರ ವಿಧಿಸಲಾಗುವುದು. ಮಹಿಳಾ ಪ್ರಯಾಣಿಕರು ಈ ಮೇಲಿನ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಶಕ್ತಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಾಕರಸಾ ಸಂಸ್ಥೆ ಹಾವೇರಿ ವಿಭಾಗ ಪ್ರಕಟಣೆಯಲ್ಲಿ ತಿಳಿಸಿದೆ.
ಗುರುತಿನ ಚೀಟಿ ಕಡ್ಡಾಯ
ಕರ್ನಾಟಕ ರಾಜ್ಯದ ಎಲ್ಲ ಮಹಿಳೆಯರು, ವಿದ್ಯಾರ್ಥಿನಿಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರು ರಾಜ್ಯಾದ್ಯಂತ ಉಚಿತವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗುತ್ತಿದೆ. ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವಾಗ ಅವರ ವಾಸಸ್ಥಳ ನಮೂದಾಗಿರುವ ಗುರುತಿನ ಚೀಟಿಗಳಾದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ, ಚಾಲನಾ ಪರವಾನಗಿ ಪತ್ರ, ಕರ್ನಾಟಕ ಸರ್ಕಾರದ ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯ ವಿತರಿಸಿರುವ ಯಾವುದಾದರೂ ಒಂದು ಗುರುತಿನ ಚೀಟಿ ಕಡ್ಡಾಯವಾಗಿ ಹೊಂದಿರಬೇಕು.