

ಮೈಸೂರು: ನಗರ ಪ್ರದೇಶಗಳಲ್ಲಿನ ಜನರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಮಾಹಿತಿ ಹಾಗೂ ಅರ್ಹರಿಗೆ ಯೋಜನೆಗಳನ್ನು ತಲುಪಿಸುವ ವಿಕಾಸ ಸಂಕಲ್ಪ ಯಾತ್ರೆಗೆ ಶನಿವಾರ ಚಾಲನೆ ನೀಡಲಾಯಿತು.
ಮೈಸೂರು ನಗರಕ್ಕೆ ಶನಿವಾರ ಆಗಮಿಸಿರುವ ವಿಕಸಿತ ಸಂಕಲ್ಪ ಭಾರತದ ಯಾತ್ರೆ ವಾಹನಕ್ಕೆ ರೈಲ್ವೆ ನಿಲ್ದಾಣದ ಮುಂಭಾಗ ನೈಋತ್ಯ ರೈಲ್ವೆಯ ಮೈಸೂರು ವಿಭಾಗದ ವ್ಯವಸ್ಥಾಪಕಿ ಶಿಲ್ಪಿ ಅಗರ್ವಾಲ್ ಚಾಲನೆ ನೀಡಿದರು.
ಕೇಂದ್ರ ಸರ್ಕಾರದ ಯೋಜನೆಗಳನ್ನು ನಗರ ಪ್ರದೇಶದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವ ನಿಟ್ಟಿನಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ವಿಕಾಸ ಸಂಕಲ್ಪ ಯಾತ್ರೆ ಮುಖಾಂತರ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ. ಇದರಿಂದ ನಗರ ಪ್ರದೇಶದಲ್ಲಿರುವ ಲಕ್ಷಾಂತರ ಜನರು ಕೇಂದ್ರ ಸರ್ಕಾರದ ಯೋಜನೆಗಳ ಲಾಭ ಪಡೆಯಲು ಸಹಕಾರಿಯಾಗಲಿದೆ. ಅರ್ಹರು ಈ ಯೋಜನೆಗಳನ್ನು ಪಡೆಯಲು ಮುಂದಾಗಬೇಕು ಎಂದು ತಿಳಿಸಿದರು.
ಫಲಾನುಭವಿ ಸಲೀಂ ಮಾತನಾಡಿ, ಪ್ರಧಾನಮಂತ್ರಿ ನೀಡುವ ಸಾಲದ ಯೋಜನೆಯಲ್ಲಿ ಸಾಲ ಪಡೆದು ಹೊಸ ಆಟೋ ಖರೀದಿಸಿ ಆರ್ಥಿಕತೆ ಹೆಚ್ಚಿಸಿಕೊಂಡಿದ್ದೇನೆ. ಮೊದಲು ಬಾಡಿಗೆ ಆಟೋ ಮುಖಾಂತರ ಹಣ ಉಳಿತಾಯವಾಗುತ್ತಿರಲಿಲ್ಲ. ಇದೀಗ ಸ್ವಂತ ಆಟೋದಲ್ಲಿ ಹೆಚ್ಚಿನ ದುಡಿಮೆ ಮಾಡಿ ಜೀವನಕ್ಕೆ ಸಹಕಾರಿಯಾಗಿದೆ ಎಂದರು.
ಫಲಾನುಭವಿ ನವೀನ್‌ಕುಮಾರ್ ಮಾತನಾಡಿ, ಕೇಂದ್ರ ಸರ್ಕಾರದ ಪಿಎಂಐಜಿಪಿ ಯೋಜನೆ ಅಡಿಯಲ್ಲಿ ನೀಡುವ ಸಾಲದಲ್ಲಿ 10 ಲಕ್ಷ ರೂ. ಸಾಲ ಪಡೆದು ಮರದ ಕೆಲಸ ವೃದ್ಧಿಸಿಕೊಂಡಿದ್ದೇನೆ. ಈ ಸಾಲದ ಮುಖಾಂತರ 10 ಜನರಿಗೆ ಉದ್ಯೋಗ ನೀಡಿ ನಿರುದ್ಯೋಗ ಸಮಸ್ಯೆ ನೀಗಿಸಲು ಮುಂದಾಗಿದ್ದೇನೆ ಎಂದರು.ಎಸ್‌ಬಿಐ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕಿ ಜಯಂತಿ ಇದ್ದರು.