ರೆಡ್ ಎಫ್‌ಎಂ 93.5 ವತಿಯಿಂದ ವಿಜಯವಾಣಿ ಮಾಧ್ಯಮ ಸಹಯೋಗದೊಂದಿಗೆ ಆಯೋಜಿಸಿರುವ ‘ತಂಬಾಕು ಬಿಟ್ಟಾಕು’ ಕಾರ್ಯಕ್ರಮಕ್ಕೆ ಚಾಲನೆ

2
Published on

ವಿಶ್ವ ತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ನಂ.1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಮಾಧ್ಯಮ ಸಹಯೋಗದೊಂದಿಗೆ ರೆಡ್ ಎಫ್‌ಎಂ 93.5 ಆಯೋಜಿಸಿರುವ ‘ತಂಬಾಕು ಬಿಟ್ಟಾಕು’ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ದೊರೆಯಿತು.

ನಾರಾಯಣ ಹೆಲ್ತ್, ಫಿನಿಕ್ಸ್ ಸುಜುಕಿ ಹಾಗೂ ಇ ಕನ್ನಡ ವಾಹಿನಿ ಸಹಯೋಗದಲ್ಲಿ ಅರಮನೆ ಕೋಟೆ ಅಂಜನೇಯಸ್ವಾಮಿ ದೇವಸ್ಥಾನದ ಮುಂದೆ ಆಯೋಜಿಸಿದ್ದ ವಿಶ್ವ ತಂಬಾಕು ರಹಿತ ದಿನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ‘ತಂಬಾಕು ಬಿಟ್ಟಾಕು’ ಜಾಗೃತಿ ವಾಹನಕ್ಕೂ ಚಾಲನೆ ನೀಡಿದರು.

ಎಸಿಪಿ ಕೆ.ಆರ್.ರಾಜೇಂದ್ರ ಮಾತನಾಡಿ, ಎಲ್ಲರೂ ಮೊದಲು ಆರೋಗ್ಯಕ್ಕೆ ಆದ್ಯತೆ ನೀಡಬೇಕು. ತಾವು ಕಲಿತಿರುವ ಕೆಟ್ಟ ಚಟಗಳಿಂದ ಹೊರಬರಬೇಕು. ಮದ್ಯಪಾನ, ಧೂಮಪಾನ, ಗುಟ್ಖಾ ಸೇವಿಸುವುದನ್ನು ಬಿಡಬೇಕು. ಇಲ್ಲದಿದ್ದರೆ ನಾವು ಎಷ್ಟೇ ಸಂಪಾದಿಸಿದರೂ ನಮ್ಮ ಹಣ ವೇಸ್ಟ್ ಆಗುತ್ತದೆ. ಆರೋಗ್ಯ ಹಾಳು ಮಾಡಿಕೊಂಡರೆ ಏನು ಗಳಿಸಿದರೂ ಪ್ರಯೋಜನ ಆಗಲ್ಲ. ಎಲ್ಲವನ್ನು ಆಸ್ಪತ್ರೆಗೆ ಕಟ್ಟಬೇಕಾಗುತ್ತದೆ. ಇದರಿಂದ ನಮ್ಮ ಕುಟುಂಬಕ್ಕೂ ಸಮಸ್ಯೆಯಾಗುತ್ತದೆ. ಆದ್ದರಿಂದ ಎಲ್ಲರೂ ಇಂತಹ ಕೆಟ್ಟ ವಸ್ತುಗಳ ಸೇವನೆ ನಿಲ್ಲಿಸುವ ಮೂಲಕ ಯೋಗ, ಪ್ರಾಣಾಯಾಮ, ವಾಕಿಂಗ್ ಮಾಡಬೇಕು ಎಂದರು.

ವಿಜಯವಾಣಿ ಮೈಸೂರು ಬ್ಯೂರೋ ಮುಖ್ಯಸ್ಥ ಎಂ.ಆರ್.ಸತ್ಯನಾರಾಯಣ ಮಾತನಾಡಿ, ‘ತಂಬಾಕು ಬಿಟ್ಟಾಕು’ ಜಾಗೃತಿ ಕಾರ್ಯಕ್ರಮ ಒಂದು ದೊಡ್ಡ ಇವೆಂಟ್ ಆಗಿದೆ. ರೆಡ್ ಎಫ್‌ಎಂ ಮಾಡುವ ಎಲ್ಲ ಸಮಾಜಮುಖಿ ಕೆಲಗಳಿಗೂ ವಿಜಯವಾಣಿ ಪತ್ರಿಕೆ ಸಾಥ್ ನೀಡುತ್ತಿದೆ. ದೇಶದಲ್ಲಿ ತಂಬಾಕು ಸೇವನೆ ದಿನದಿಂದ ದಿನಕ್ಕೆ ವ್ಯಾಪಕವಾಗುತ್ತಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಯುವ ಸಮೂಹವೇ ಇದರ ಆಕರ್ಷಣೆಗೆ ಒಳಗಾಗುತ್ತಿರುವ ಆತಂಕಕಾರಿ ಅಂಶ ಸಮೀಕ್ಷೆಯೊಂದರಿಂದ ಬೆಳಕಿಗೆ ಬಂದಿದೆ. ತಲಾ ಹತ್ತು ಹೆಣ್ಣು ಮಕ್ಕಳಲ್ಲಿ ಒಬ್ಬರು, ತಲಾ ಹತ್ತು ಗಂಡು ಮಕ್ಕಳಲ್ಲಿ ಇಬ್ಬರು ತಂಬಾಕು ಸೇವಿಸುತ್ತಿದ್ದಾರೆ. ಹರಿಹರೆಯದವರು ಮೋಜು, ಮಸ್ತಿಗಾಗಿ ತಂಬಾಕು ಸೇವಿಸಲು ಪ್ರಾರಂಭಿಸುತ್ತಿದ್ದಾರೆ. ಬಳಿಕ ಅದು ಚಟವಾಗುತ್ತಿದ್ದು, ಪಾಲಕರು ಎಚ್ಚರ ವಹಿಸಬೇಕು ಎಂದು ಸಲಹೆ ನೀಡಿದರು.

ನಾರಾಯಣ ಹೆಲ್ತ್‌ನ ವೈದ್ಯ ಡಾ.ನಿಶ್ಚಲ್ ರಾಜ್ ಮಾತನಾಡಿ, ತಂಬಾಕು ಸೇವನೆಯಿಂದ ಕ್ಯಾನ್ಸರ್ ಜತೆಗೆ ಅನೇಕ ರೋಗಗಳು ಬರುತ್ತಿವೆ. ಇಂತಹ ಕಾರ್ಯಕ್ರಮಗಳ ಮೂಲಕ ಸಾರ್ವಜನಿಕರಲ್ಲಿ ಪ್ರತಿನಿತ್ಯ ಅರಿವು ಮೂಡಿಸಬೇಕಾಗಿದೆ ಎಂದರು.

ಡಾ.ಜಿ.ವಿದ್ಯಾ ಮಾತನಾಡಿ, ತಂಬಾಕು ಬಳಕೆಯಿಂದ ಹೃದಯ ಸಮಸ್ಯೆ ಜತೆಗೆ ಕ್ಯಾನ್ಸರ್ ಬರುತ್ತಿದೆ. ಬಾಯಿ, ರಕ್ತನಾಳಕ್ಕೆ ಹಾನಿ, ಕುತ್ತಿಗೆ ಮತ್ತು ಶಿರದ ಕ್ಯಾನ್ಸರ್, ಗಂಟಲು, ಧ್ವನಿಪೆಟ್ಟಿಗೆ, ಮಿದುಳು ಸೇರಿ ದೇಹದ ವಿವಿಧ ಅಂಗಗಳ ಕ್ಯಾನ್ಸರ್‌ಗೆ ಕಾರಣವಾಗಲಿದೆ. ಪಾರ್ಶ್ವವಾಯು, ಕುರುಡುತನ, ಹಲ್ಲು ಮತ್ತು ಒಸಡು ಕಾಯಿಲೆಗಳೂ ಬರುತ್ತಿವೆ. ಇದರ ಬಗ್ಗೆ ಎಚ್ಚರ ವಹಿಸಬೇಕು ಎಂದರು. ನಾರಾಯಣ ಹೆಲ್ತ್‌ನ ಮಾರ್ಕೇಟಿಂಗ್ ಹೆಡ್ ಸೋಮನಾಥ್, ವೈದ್ಯ ಡಾ.ಸುಹಾಸ್, ಫಿನಿಕ್ಸ್ ಸುಜುಕಿಯ ನೀಲಲೋಚನ್, ಭರತ್ , ರೆಡ್ ಎಫ್‌ಎಂ 93.5ನ ಮೈಸೂರು ವಿಭಾಗದ ಮುಖ್ಯಸ್ಥ ಚೇತನ್‌ಕುಮಾರ್ ಇತರರಿದ್ದರು.

9 ರವರೆಗೆ ಜಾಗೃತಿ:

‘ತಂಬಾಕು ಬಿಟ್ಟಾಕು’ ಜಾಗೃತಿ ವಾಹನವೂ ಜೂ.9ರವರೆಗೆ ನಗರದ ವಿವಿಧ ಕಾಲೇಜುಗಳಲ್ಲಿ ತಂಬಾಕು, ಸಿಗರೇಟು ಸೇವನೆಯಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಯುವಜನತೆಯಲ್ಲಿ ಜಾಗೃತಿ ಮೂಡಿಸಲಿದೆ. ನಿತ್ಯ ಎರಡು ಕಾಲೇಜುಗಳಂತೆ ನಮ್ಮ ತಂಡ ಹಾಗೂ ನಾರಾಯಣ ಆಸ್ಪತ್ರೆ ವೈದ್ಯರ ತಂಡ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net