

ಮಂಡ್ಯ: ಗಣರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಕಣ್ಮನ ಸೆಳೆಯುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ನಗರದ ತೋಟಗಾರಿಕೆ ಕಚೇರಿ ಆವರಣ ಹಾಗೂ ಕಾವೇರಿ ಉದ್ಯಾನದಲ್ಲಿ ಆರಂಭಗೊಂಡ ಐದು ದಿನದ ಫಲ ಪುಷ್ಪ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಈ ಬಾರಿ ಫಲಪುಷ್ಪ ಪ್ರದರ್ಶನ ಅದ್ದೂರಿಯಾಗಿ ಆಯೋಜಿಸಲಾಗಿದೆ. ಲಕ್ಷಾಂತರ ಬಗೆ ಬಗೆಯ ಹೂವುಗಳನ್ನು ಬಳಸಿ ಕಲಾಕೃತಿ ನಿರ್ಮಿಸಲಾಗಿದೆ. ಈ ಪ್ರದರ್ಶನ ಸಾರ್ವಜನಿಕರಿಗೆ ಖುಷಿ ಕೊಡಲಿದೆ ಎಂದರು.
ಸಚಿವ ಸಿಆರ್‌ಎಸ್ ಪತ್ನಿ ಧನಲಕ್ಷ್ಮೀ, ಶಾಸಕ ರವಿಕುಮಾರ್ ಗಣಿಗ, ಜಿಲ್ಲಾಧಿಕಾರಿ ಡಾ.ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಅಸಿಫ್, ಜಿಲ್ಲಾ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ, ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ರೂಪಶ್ರೀ, ಕೈಮಗ್ಗ ಇಲಾಖೆ ಉಪನಿರ್ದೇಶಕ ರಂಗಸ್ವಾಮಿ ಇತರರಿದ್ದರು.
ಗಮನಸೆಳೆಯುತ್ತಿರುವ ಪ್ರದರ್ಶನ: ಆಕರ್ಷಕ ಬಣ್ಣದ ನಾನಾ ಜಾತಿಯ ಹೂಗಳಿಂದ ಹಲವಾರು ಕಲಾಕೃತಿಗಳು ಅರಳಿ ನಿಂತಿದ್ದು, ಜನರನ್ನು ಕೈ ಬೀಸಿ ಕರೆಯುತ್ತಿದೆ. 9 ಲಕ್ಷ ವಿವಿಧ ಬಣ್ಣದ ಸೇವಂತಿಗೆ ಮತ್ತು ಗುಲಾಬಿ ಹೂವುಗಳಿಂದ ಪ್ರವಾಸಿ ತಾಣ, ದೇವಾಲಯ ನಿರ್ಮಾಣವಾಗಿದೆ. ವಿವಿಧ ಹೂ ಅಲಂಕಾರಿಕ ಕುಂಡಗಳ ಜೋಡಣೆ, ತರಕಾರಿ ಬೆಳೆಗಳು ಹಾಗೂ ಪೌಷ್ಟಿಕ ಕೈತೋಟ ಮಾದರಿ, ತರಕಾರಿ ಕೆತ್ತನೆ ಪ್ರದರ್ಶನ ಮತ್ತು ಜಿಲ್ಲೆಯ ತೋಟಗಾರಿಕೆ ಬೆಳೆಗಳ ವೈವಿದ್ಯತೆಯ ಮಾದರಿಗಳ ಪ್ರದರ್ಶನ, ರೈತರಿಂದ ಗ್ರಾಹಕರಿಗೆ ನೇರ ಮಾರಾಟ ಮತ್ತು ವಿವಿಧ ಅಭಿವೃದ್ಧಿ ಇಲಾಖೆಗಳ ಕಾರ್ಯಕ್ರಮಗಳ ಸಮಗ್ರ ಮಾಹಿತಿ ದೊರೆಯುತ್ತಿದೆ.
ಯುವ ಜನತೆಯನ್ನು ಸೆಳೆಯಲು ಹತ್ತು ವಿವಿಧ ಕಡೆಗಳಲ್ಲಿ ಸೆಲ್ಫಿ ಪಾಯಿಂಟ್, ಹೂವಿನ ಆಕೃತಿಯ ಕ್ಷಯ ರೋಗ ಕುರಿತು ಜಾಗೃತಿ, ನರೇಗಾ ಯೋಜನೆಯ ಮಾಹಿತಿಯೊನ್ನೊಳಗೊಂಡ ಸ್ಥಬ್ಥ ಚಿತ್ರ, ವಿವಿಧ ಆಕರ್ಷಕ ಬಗೆಯ ಅಡಿನಿಯಂ ಗಿಡಗಳ ಪ್ರದರ್ಶಿಕೆ, ಬೋನ್ಸಾಯ್ ಗಿಡಗಳ ಪ್ರದರ್ಶಿಕೆ, ವಿವಿಧ ತರಕಾರಿ ಹಣ್ಣುಗಳನ್ನು ಬಳಸಿ ಕಲಾಕೃತಿಗಳ ಕೆತ್ತನೆ ಹಾಗೂ ಇಕೆಬನಾ ಜೋಡಣೆ ಎಲ್ಲರನ್ನೂ ಆಕರ್ಷಿಸುತ್ತಿದೆ. 35 ಸಾವಿರಕ್ಕೂ ಹೆಚ್ಚು 40 ಬಗೆಯ ವಿವಿಧ ಜಾತಿಯ ಹೂವುಗಳ ಅಲಂಕಾರಿಕ ಕುಂಡಗಳ ಜೋಡಣೆ, 1.50 ಲಕ್ಷ ವಿವಿಧ ಜಾತಿಯ ಅಲಂಕಾರಿಕ ಗಿಡಗಳಾದ ಪೆಟೊನಿಯಾ, ಸಾಲ್ವಿಯಾ, ಅಂಟಿರೈನಂ, ಸೆಲೋಶಿಯಾ, ಮಾರಿಗೋಲ್ಡ್, ಜೀನಿಯಾ, ಸೇವಂತಿಗೆ, ಪಾಯ್ನಿಸೆಟಿಯಾ ಕಾಣಬಹುದು.
ವಿವಿಧ ಜಿಲ್ಲೆಗಳ ಕೈಮಗ್ಗ, ನೇಕಾರರ ಸಹಕಾರ ಸಂಘಗಳು ಭಾಗವಹಿಸಿವೆ. ಕೈ ಮಗ್ಗ ನೇಕಾರರಿಂದ ತಯಾರಿಸಿರುವ ಹತ್ತಿ, ರೇಷ್ಮೆ, ಮೊಳಕಾಲ್ಮೂರು ರೇಷ್ಮೆ ಸೀರೆ, ಚಿಂತಾಮಣಿ ರೇಷ್ಮೆ ಸೀರೆ, ಕಾಟನ್ ಸೀರೆ, ಪಂಚೆ, ಬೆಡ್‌ಶೀಟ್, ಟವಲ್, ಲುಂಗಿ ಹಾಗೂ ಇತರೆ ಕೈ ಮಗ್ಗ ಉತ್ಪನ್ನಗಳನ್ನು ಶೇ.20 ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಇದಲ್ಲದೆ ಕೃಷಿ ಇಲಾಖೆ, ಮೀನುಗಾರಿಕೆ ಇಲಾಖೆ, ಶಿಕ್ಷಣ ಇಲಾಖೆ, ಅರಣ್ಯ ಇಲಾಖೆ, ಪಶು ಸಂಗೋಪನೆ ಇಲಾಖೆ, ಆರೋಗ್ಯ ಇಲಾಖೆ, ಕೈಗಾರಿಕೆ ಮತ್ತು ಖಾದಿ ಮತ್ತು ಗ್ರಾಮೋದ್ಯೋಗ ವತಿಯಿಂದ ಕಲಾಕೃತಿ ಹಾಗೂ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಲಾಗುತ್ತಿದೆ.