3ನೇ ಹಂತದ ನೀರು ಪೂರೈಕೆ ಯೋಜನೆಗೆ ಚಾಲನೆ

09 CRP-1A
ಚನ್ನರಾಯಪಟ್ಟಣ ತಾಲೂಕಿನ, ದಂಡಿಗನಹಳ್ಳಿ ಹೋಬಳಿಯ ದೂತನೂರು ಕಾವಲಿನಲ್ಲಿ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ನೀರು ಪೂರೈಸುವ ಕಾರ್ಯಕ್ಕೆ ಶಾಸಕ ಎಚ್.ಡಿ.ರೇವಣ್ಣ ಚಾಲನೆ ನೀಡಿದರು
Published on

ಚನ್ನರಾಯಪಟ್ಟಣ : ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ನೀರು ಪೂರೈಸುವ ಕಾರ್ಯಕ್ಕೆ ಶಾಸಕ ಎಚ್.ಡಿ.ರೇವಣ್ಣ ಗುರುವಾರ ಚಾಲನೆ ನೀಡಿದರು.

ತಾಲೂಕಿನ, ದಂಡಿಗನಹಳ್ಳಿ ಹೋಬಳಿಯ ದೂತನೂರು ಕಾವಲಿನಲ್ಲಿ ಇತ್ತೀಚೆಗೆ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯ ಮೂರನೇ ಹಂತದ ನೀರು ಪೂರೈಸುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, 4,400 ಎಕರೆ ಪ್ರದೇಶಕ್ಕೆ ನೀರೊದಗಿಸುವ ಮೂರನೇ ಹಂತದ ಕಾಚೇನಹಳ್ಳಿ ಏತ ನೀರಾವರಿ ಯೋಜನೆಯನ್ನು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿದ್ದಾಗ ಮೊದಲ, ಎರಡನೇ ಹಂತದ ಯೋಜನೆಗೆ ಹಣ ಬಿಡುಗಡೆ ಮಾಡಿದ್ದರು, ಮೊದಲ ಹಂತದ ಯೋಜನೆ 1390 ಎಕರೆ, ಎರಡನೇ ಹಂತದ ಯೋಜನೆ 6610 ಎಕರೆ, ಮೂರನೇ ಹಂತದ ಯೋಜನೆಯಿಂದ 4400 ಎಕರೆಗೆ ನೀರು ಒದಗಿಸುತ್ತದೆ. 2019 ರಲ್ಲಿ ಕುಮಾರಸ್ವಾಮಿ ಅವರು ಹಣ ಬಿಡುಗಡೆ ಮಾಡಿದ್ದರು, ಮೂರನೇ ಹಂತ ಮುಗಿದು ನಾಲ್ಕು ವರ್ಷ ಆಗಬೇಕಿತ್ತು. ಆದರೆ ಕೆಲವರು ಬೇಕಂತಲೇ ಹಲವು ಕಡೆ ರೈತರಿಂದ ಅಡ್ಡಿಪಡಿಸಿದರು. ನೀರಾವರಿ ಇಲಾಖೆ ಅಧಿಕಾರಿಗಳಿಗೆ ಪರಿಶೀಲನೆಗೆ ಬನ್ನಿ ಅಂದೆ, ಹೋದರೆ ಸಸ್ಪೆಂಡ್ ಮಾಡಿಸ್ತೀನಿ ಎಂದು ಕೆಲವರು ಹೆದರಿಸಿದ್ದಾರೆ. ಹಾಗಾಗಿ ನೀವು ಹೋಗಿ ನಾನೇ ಪರಿಶೀಲನೆ ಮಾಡುತ್ತೇನೆ ಎಂದು ಅಧಿಕಾರಿಗಳನ್ನು ಕಳುಹಿಸಿದ್ದೇನೆ. ರೈತರಿಗೆ ನೀರು ಪೂರೈಕೆ ಆಗಬೇಕು, ಕಾಲ ಬಂದಾಗ ಮಾತನಾಡುತ್ತೇನೆ ಎಂದು ಸಂಸದ ಶ್ರೇಯಸ್ ಪಟೇಲ್ ವಿರುದ್ಧ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದರು.

ಈ ವೇಳೆ ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ತಹಸೀಲ್ದಾರ್ ಶಂಕರಪ್ಪ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರೀಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ತ್ಯಾಗರಾಜ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ದಂಡಿಗನಹಳ್ಳಿ ಹೋಬಳಿ ಭಾಗದ ಮುಖಂಡರು ಹಾಜರಿದ್ದರು.

ಶಾಸಕಎಚ್.ಡಿ.ರೇವಣ್ಣಮೊದಲ, ಎರಡನೇ ಹಂತದ ಯೋಜನೆಯನ್ನು ಸಿಎಂ ಸಿದ್ದರಾಮಯ್ಯ ಅವರು ಉದ್ಘಾಟನೆ ಮಾಡಿದರು. ನಾನೇನು ಬೇಡ ಅಂದಿಲ್ಲ. 250 ಕೋಟಿ ರೂ. ಖರ್ಚು ಮಾಡಿ ಆಸ್ಪತ್ರೆ ಕಟ್ಟಿಸಿದೆ, ಸಿದ್ದರಾಮಯ್ಯ ಬಂದು ಉದ್ಘಾಟನೆ ಮಾಡಿದರು. ನಾನೇನು ಅದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ, ನಮಗೆ ಬೇಕಿರುವುದು ಜಿಲ್ಲೆಯ ಅಭಿವೃದ್ಧಿ, ಜನರ ಕೆಲಸ ದಂಡಿಗನಹಳ್ಳಿ ಹೋಬಳಿಯ ಜನರ ಕನಸಿತ್ತು. ದೇವೇಗೌಡರು ಏನು ಮಾಡಲಿಲ್ಲ ಎನ್ನುತ್ತಿದ್ದರು, ಈಗ ಮೂರನೇ ಹಂತದ ನೀರಾವರಿ ಯೋಜನೆಗೆ ಚಾಲನೆ ನೀಡಿದ್ದೇವೆ. ಸರ್ಕಾರ ನಮ್ಮ ಜಿಲ್ಲೆಯ ಕೆಲಸವನ್ನೂ ಮಾಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net