ಸೂರ್ಯಕಾಂತಿ ಖರೀದಿ ನೋಂದಣಿಗೆ ಚಾಲನೆ

ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಆರಂಭಿಸಿರುವ ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಬೆಳೆಗಾರರು ಹೆಸರನ್ನು ನೋಂದಾಯಿಸಿಕೊಂಡರು.
ಗುಂಡ್ಲುಪೇಟೆ ಪಟ್ಟಣದ ಎಪಿಎಂಸಿ ಕಚೇರಿಯಲ್ಲಿ ಆರಂಭಿಸಿರುವ ಸೂರ್ಯಕಾಂತಿ ಖರೀದಿ ಕೇಂದ್ರದಲ್ಲಿ ಬೆಳೆಗಾರರು ಹೆಸರನ್ನು ನೋಂದಾಯಿಸಿಕೊಂಡರು.
Published on

ಗುಂಡ್ಲುಪೇಟೆ: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ. ಗುಣಮಟ್ಟದ ಸೂರ್ಯಕಾಂತಿ ಬೀಜ ಖರೀದಿಸಲು ಪಟ್ಟಣ ಹಾಗೂ ತೆರಕಣಾಂಬಿ ಎಪಿಎಂಸಿ ಆವರಣದಲ್ಲಿ ಸೋಮವಾರ ನೋಂದಣಿ ಕಾರ್ಯಕ್ಕೆ ಚಾಲನೆ ದೊರೆಯಿತು.

ಕೇಂದ್ರ ಸರ್ಕಾರವು ಪ್ರತಿ ಕ್ವಿಂಟಾಲ್‌ಗೆ 7280 ರೂ.ದರ ನಿಗದಿಪಡಿಸಿದ್ದು, ಅರ್ಹ ರೈತರು ಪಹಣಿ, ಆಧಾರ್ ಮತ್ತು ಆಧಾರ್ ಜೋಡಣೆಯ ಬ್ಯಾಂಕ್ ಪಾಸ್ ಪುಸ್ತಕಗಳ ಜೆರಾಕ್ಸ್ ಪ್ರತಿಯನ್ನು ತಂದು ನೋಂದಾಯಿಸಿಕೊಳ್ಳುತ್ತಿದ್ದಾರೆ. ಮೊದಲನೇ ದಿನವೇ 300ಕ್ಕೂ ಹೆಚ್ಚಿನ ರೈತರು ಅಗತ್ಯ ದಾಖಲೆಗಳೊಡನೆ ಆಗಮಿಸಿ ಹೆಸರು ನೋಂದಾಯಿಸಿಕೊಂಡರು.

ಈ ಬಾರಿಯ ಬೆಳೆ ಸಮೀಕ್ಷೆಯಲ್ಲಿ ಸೂರ್ಯಕಾಂತಿ ಬೆಳೆ ಎಂದು ಆರ್.ಟಿ.ಸಿಯಲ್ಲಿ ನಮೂದಾಗಿರುವ ರೈತರು ಮಾತ್ರ ಅರ್ಹರಾಗಿದ್ದು,ಪ್ರತಿ ಎಕರೆಗೆ ಗರಿಷ್ಠ 3 ಕ್ವಿಂಟಾಲ್‌ನಂತೆ ಪ್ರತಿ ರೈತರು 15 ಕ್ವಿಂಟಾಲ್ ಉತ್ಪನ್ನವನ್ನು ಮಾರಾಟ ಮಾಡಬಹುದಾಗಿದೆ. ಆಧಾರ್ ಸಂಖ್ಯೆಗೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಹಣ ಪಾವತಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net