ಉಳಿತಾಯ ಖಾತೆ ಅಭಿಯಾನಕ್ಕೆ ಚಾಲನೆ

15 vikram 11
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ರಾಷ್ಟ್ರ ಜಾಗತಿಕವಾಗಿ ತೆರೆದುಕೊಂಡು ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿರುವ ಹಂತದಲ್ಲಿ ಬ್ಯಾಂಕಿಂಗ್​ ರಂಗದ ಸಮಗ್ರ ಸೇವೆಗಳು ಜನಸಾಮಾನ್ಯರನ್ನು ಪರಿಣಾಮಕಾರಿಯಾಗಿ ತಲುಪಬೇಕಿದೆ ಎಂದು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್​ ಧಾರವಾಡ ಪ್ರಾದೇಶಿಕ ವ್ಯವಸ್ಥಾಪಕ ಚಂದ್ರಶೇಖರ ಪಾಟೀಲ ಹೇಳಿದರು.
ನಗರದ ಕೆವಿಜಿ ಬ್ಯಾಂಕ್​ ಮುಖ್ಯ ಕಚೇರಿಯಲ್ಲಿ ಸೋಮವಾರ ಬ್ಯಾಂಕಿನ ಉಳಿತಾಯ ಖಾತೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಸೆ. 5ರಂದು ಬ್ಯಾಂಕ್​ 20ನೇ ವರ್ಷಕ್ಕೆ ಪಾದಾರ್ಪಣೆ ಮಾಡಲಿದೆ. ಈ ಸಮಯವನ್ನು ಸ್ಮರಣೀಯವಾಗಿಸಲು ಬ್ಯಾಂಕ್​ ವರ್ಷ ಪೂರ್ತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಅವಧಿಯಲ್ಲಿ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಮತ್ತು ಜನರನ್ನು ಸಾಮಾಜಿಕ ಸುರಕ್ಷಾ ಯೋಜನೆ ಅಡಿ ತರಲು ಜು. 15ರಿಂದ ಸೆ. 5ರವರೆಗೆ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಈ ಅವಧಿಯಲ್ಲಿ ಬ್ಯಾಂಕ್​ ಉಳಿತಾಯ ಖಾತೆ, ಪ್ರಧಾನ ಮಂತ್ರಿ ಜೀವನ ಭಿಮಾ ಯೋಜನೆ ಮತ್ತು ಪ್ರಧಾನಮಂತ್ರಿ ಸುರಕ್ಷಾ ಯೋಜನೆಗಳಲ್ಲಿ ಕ್ರಮವಾಗಿ 2 ಲಕ್ಷ ಹೊಸ ಖಾತೆಗಳನ್ನು ಹೊಂದಲು ಉದ್ದೇಶಿಸಿದೆ ಎಂದರು.
ಬ್ಯಾಂಕಿನ ಮುಖ್ಯ ಪ್ರಬಂಧಕ ಉಲ್ಲಾಸ ಗುನಗಾ ಮಾತನಾಡಿ, ಮೂಲಭೂತ ಬ್ಯಾಂಕಿಂಗ್​ ವ್ಯವಹಾರಕ್ಕೆ ಅನುಕೂಲ ಒದಗಿಸಲು ಉಳಿತಾಯ ಖಾತೆಯೇ ಮೂಲಾಧಾರ. ಬ್ಯಾಂಕಿನ 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಎಲ್ಲ 629 ಶಾಖೆಗಳೂ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದು, ಜನರು ಇದರ ಸದುಪಯೋಗ ಪಡೆಯಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net