ಕೆಎಲ್​ಇ ಧ್ವನಿ ಇಂಟರ್​ನೆಟ್ ರೇಡಿಯೋ ಆರಂಭ

KLE New
Published on

ಹುಬ್ಬಳ್ಳಿ : ಹುಬ್ಬಳ್ಳಿಯ ಏಕೈಕ ಸಮುದಾಯ ಬಾನುಲಿ ಕೇಂದ್ರ ಕೆಎಲ್​ಇ ಧ್ವನಿಯ ಇಂಟರ್​ನೆಟ್ ಪ್ರಸಾರ ಸೇವೆ ಸೋಮವಾರದಿಂದ (ಅ.7) ಆರಂಭಗೊಂಡಿದೆ.

ಕೆಎಲ್​ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಪ್ರಕಾಶ ತೇವರಿ ಅವರು ಕೆಎಲ್​ಇ ಧ್ವನಿಯ ಸಿಗ್ನೇಚರ್ ಟ್ಯೂನ್ ಅನ್ನು ಪ್ರಸಾರ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ನಂತರ ಮಾತನಾಡಿದ ಡಾ. ಪ್ರಕಾಶ ತೇವರಿ, ಕೆಎಲ್​ಇ ಧ್ವನಿಯು ಕಳೆದ 11 ವರ್ಷಗಳಲ್ಲಿ ಶಿಕ್ಷಣ, ಆರೋಗ್ಯ, ಸಮುದಾಯದ ಅಭಿವೃದ್ಧಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತ ಹುಬ್ಬಳ್ಳಿಯ ಜನಮನದ ಧ್ವನಿಯಾಗಿದೆ. ಕೇವಲ ಹುಬ್ಬಳ್ಳಿಗಷ್ಟೇ ಸೀಮಿತವಾಗಿದ್ದ ಕೆಎಲ್​ಇ ಧ್ವನಿ-ಬಿವಿಬಿ 90.4 ಈಗ ಜಗತ್ತಿನಾದ್ಯಂತ ಕೇಳಿಸಲಿದೆ ಎಂದು ಹೇಳಿದರು.

ಕೇವಲ ಹುಬ್ಬಳ್ಳಿಯ 10 ಕಿ.ಮೀ. ವ್ಯಾಪ್ತಿಯವರೆಗೆ ಮಾತ್ರ ಕೆಎಲ್​ಇ ಧ್ವನಿಯ ತರಂಗಗಳು ಸೀಮಿತಗೊಂಡಿದ್ದವು. ಇನ್ನು ಮುಂದೆ ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಮೊಬೈಲ್ ಫೋನ್​ನಲ್ಲಿ ಇಂಟರ್​ನೆಟ್ ಮೂಲಕ ಕೆಎಲ್​ಇ ಧ್ವನಿಯನ್ನು ಕೇಳಿಸುವುದು ಸಂತಸದ ಸಂಗತಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.

ಕೆಎಲ್​ಇ ತಾಂತ್ರಿಕ ವಿವಿ ರಜಿಸ್ಟ್ರಾರ್ ಡಾ. ಬಸವರಾಜ ಅನಾಮಿ ಮಾತನಾಡಿ, ಕೆಎಲ್​ಇ ಧ್ವನಿಯಲ್ಲಿ ಪ್ರಸಾರಗೊಳ್ಳುವ ಕಾರ್ಯಕ್ರಮಗಳು ಹುಬ್ಬಳ್ಳಿಯ ಎಲ್ಲರ ಜನಮನಸೂರೆಗೊಂಡಿವೆ. ಇಂದಿನ ದಿನಗಳಲ್ಲಿ ಇಂಟರ್​ನೆಟ್ ರೇಡಿಯೋ ಒಂದು ಹೊಸ ಸಂವಹನ ಮಾಧ್ಯಮವಾಗಿ ಎಲ್ಲರೂ ಉಪಯೋಗಿಸುವಂತಾಗಿದೆ. ಈಗ ಕೆಎಲ್​ಇ ಧ್ವನಿಯು ದೇಶ-ವಿದೇಶಗಳಲ್ಲಿ ಮೊಬೈಲ್ ಆಪ್​ನಿಂದ ಇಂಟರ್​ನೆಟ್ ರೇಡಿಯೋ ಮೂಲಕ ಕೇಳಿಸಲಿದೆ ಎಂದು ಹೇಳಿದರು.

ಕೆಎಲ್​ಇ ಧ್ವನಿಯ ನಿಲಯ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕೆಎಲ್​ಇ ತಾಂತ್ರಿಕ ವಿವಿ ಎಕ್ಸಿಕ್ಯೂಟಿವ್ ಡೀನ್ ಪ್ರೊ. ಬಿ.ಎಲ್. ದೇಸಾಯಿ, ಡೀನ್ ಡಾ. ಸಂಜಯ ಕೊಟಬಾಗಿ, ಬಾಬಾ ಭೂಸದ, ಹಿರಿಯ ರಂಗಕರ್ವಿು ಶಶಿಧರ ನರೇಂದ್ರ, ಎಂ.ಎಸ್. ಕೋಲ್ಹಾರ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net