ಕರಾವಳಿ ಮಾರುಕಟ್ಟೆಗೆ ‘ಕಿಂಗ್ ಐಸ್‌ ಕ್ರೀಂ’ ಲಗ್ಗೆ

IMG-20250313-WA0031(1)
Published on

ಮಂಗಳೂರು: ಮಹಾರಾಷ್ಟ್ರ, ಗೋವಾ, ಬೆಂಗಳೂರು, ಮೈಸೂರು ಸೇರಿದಂತೆ ದೇಶದ ಪ್ರಮುಖ ಕೇಂದ್ರಗಳಲ್ಲಿ ಈಗಾಗಲೇ ಜನಪ್ರಿಯವಾಗಿರುವ ಬೆಳಗಾವಿಯ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್‌ನ ‘ಕಿಂಗ್ ಐಸ್‌ಕ್ರೀಂ’ ಕರ್ನಾಟಕ ಕರಾವಳಿ ಭಾಗದ ಮಾರುಕಟ್ಟೆಗೆ ಕಾಲಿಟ್ಟಿದ್ದು, ಮಂಗಳೂರಿನಲ್ಲಿ ಗುರುವಾರ ಅದ್ದೂರಿಯಾಗಿ ಬಿಡುಗಡೆಗೊಂಡಿತು.

ನಗರದ ಓಷಿಯನ್ ಪರ್ಲ್ ಹೋಟೆಲ್‌ನಲ್ಲಿ ‘ಕಿಂಗ್ ಐಸ್‌ಕ್ರೀಂ’ ವೈವಿಧ್ಯಮಯ ಉತ್ಪನ್ನಗಳನ್ನು ಬಿಡುಗಡೆಗೊಳಿಸಿದ ವಿಆರ್‌ಎಲ್ ಸಮೂಹ ಸಂಸ್ಥೆಯ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ಡಾ.ವಿಜಯ ಸಂಕೇಶ್ವರ ಮಾತನಾಡಿ, ದೇಶದಲ್ಲಿ ಇಂದು ಸಾವಿರಾರು ಐಸ್‌ಕ್ರೀಂ ಬ್ರ್ಯಾಂಡ್‌ಗಳು ಇವೆ. ಕೆಲವು ಉತ್ತಮ ಬ್ರಾೃಂಡ್‌ನ ಐಸ್‌ಕ್ರೀಂಗಳು ವೆಚ್ಚ ಕಡಿಮೆ ಮಾಡಿ ಲಾಭ ಗಳಿಸುವ ಉದ್ದೇಶದಿಂದ ಗುಣಮಟ್ಟದಲ್ಲಿ ರಾಜಿ ಮಾಡಿಕೊಂಡಿವೆ. ಅದು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಬೆರಳೆಣಿಕೆಯ ಬ್ರ್ಯಾಂಡ್‌ಗಳು ಮಾತ್ರ ಉತ್ತಮ ಸ್ವಾದ, ಗುಣಮಟ್ಟ ಹಾಗೂ ಆರೋಗ್ಯಕರ ಉತ್ಪನ್ನಗಳನ್ನು ಗ್ರಾಹಕರಿಗೆ ಒದಗಿಸುತ್ತಿವೆ. ಅವುಗಳಲ್ಲಿ ಕಿಂಗ್ ಐಸ್‌ಕ್ರೀಂ ಕೂಡಾ ಒಂದು. ವಿಜಯಕಾಂತ ಡೇರಿ ಸಂಸ್ಥೆಯು ಗುಣಮಟ್ಟದ ವಿಷಯದಲ್ಲಿ ರಾಜಿ ಇಲ್ಲದೆ ಶೇ.100 ಶುದ್ಧ ಹಾಲಿನಿಂದಲೇ ತಯಾರಿಸಿದ ಆರೋಗ್ಯಕರ ಐಸ್‌ಕ್ರೀಂಗಳನ್ನೇ ನೀಡಲು ಬದ್ಧವಾಗಿದೆ ಎಂದರು.

ಕರಾವಳಿಗೆ ಪ್ರವೇಶ: ಗುಣಮಟ್ಟದಲ್ಲಿ ನಂಬರ್ ಒನ್ ಆಗುವ ಗುರಿ ತಲುಪಿದ್ದೇವೆ. ವಹಿವಾಟಿನಲ್ಲಿ ನಂಬರ್ ಒನ್ ಮುಂದಿನ ಗುರಿ. ಮಂಗಳೂರಿನ ಜನರು ಸ್ವಾದದ ಜತೆಗೆ ಗುಣಮಟ್ಟ ಹಾಗೂ ಸ್ವಚ್ಛತೆ ವಿಷಯದಲ್ಲಿ ಕಾಳಜಿ ಉಳ್ಳವರು. ಆದ್ದರಿಂದ ದೇಶದ ಗೋವಾ, ಮುಂಬೈ, ಬೆಂಗಳೂರು ನಗರಗಳಲ್ಲಿ ಗ್ರಾಹಕರು, ವಿತರಕರಿಂದ ಉತ್ತಮ ಸ್ಪಂದನೆ ದೊರೆತ ಬಳಿಕ ಸ್ವಲ್ಪ ತಡವಾಗಿ ಮಂಗಳೂರು ಮಾರುಕಟ್ಟೆ ಪ್ರವೇಶಿಸಿದ್ದೇವೆ ಎಂದರು.

ಕರಾವಳಿ ಭಾಗದಲ್ಲಿ ಬಿಸಿಲು, ತಾಪಮಾನ ಅಧಿಕ. ಅತ್ಯುತ್ತಮ ಅಭಿರುಚಿ ಹೊಂದಿರುವ ಐಸ್‌ಕ್ರೀಂ ಗ್ರಾಹಕರು ಕೂಡ ಹೆಚ್ಚು. ಇದನ್ನು ಗಮನದಲ್ಲಿಟ್ಟುಕೊಂಡು ಈ ಭಾಗದಲ್ಲಿ ದೊಡ್ಡ ಕೋಲ್ಡ್ ಸ್ಟೋರೇಜ್ ನಿರ್ಮಿಸಲಿದ್ದೇವೆ . ಈ ಭಾಗದ ಜನರು ಕಿಂಗ್ ಐಸ್‌ಕ್ರೀಂ ಅನ್ನು ಸ್ವೀಕರಿಸುತ್ತಾರೆ ಎನ್ನುವ ಸಂಪೂರ್ಣ ಭರವಸೆ ನಮಗಿದೆ. ಇಲ್ಲಿ ಮಾರುಕಟ್ಟೆಯಲ್ಲಿ ಶೀಘ್ರದಲ್ಲಿ ನಾವು ಜನಪ್ರಿಯರಾಗುತ್ತೇವೆ ಎನ್ನುವ ವಿಶ್ವಾಸವೂ ಇದೆ ಎಂದು ಡಾ.ವಿಜಯ ಸಂಕೇಶ್ವರ ತಿಳಿಸಿದರು.

10 ಸಾವಿರ ಮಳಿಗೆ: ವಿಜಯಕಾಂತ ಡೇರಿ ಉಪಾಧ್ಯಕ್ಷರಾದ ವಿಜಯಕಾಂತ್ ಮಾತನಾಡಿ, ಅಲ್ಪಾವಧಿಯಲ್ಲೇ ದೇಶದ ವಿವಿಧೆಡೆ ಕಿಂಗ್ ಐಸ್‌ಕ್ರೀಂನ 10 ಸಾವಿರ ಮಳಿಗೆಗಳಿದ್ದು, ಕರಾವಳಿಯಲ್ಲಿ 1 ಸಾವಿರ ಮಳಿಗೆ ತೆರೆಯಲಾಗಿದೆ. ಕರಾವಳಿಯಲ್ಲೇ 5 ಸಾವಿರ ಮಳಿಗೆಗಳನ್ನು ತೆರೆಯುವುದು ಸದ್ಯದ ಗುರಿಯಾಗಿದೆ. ಶುದ್ಧ ಹಾಲಿನ ಉತ್ಪನ್ನ ಹಾಗೂ ಗುಣಮಟ್ಟವೇ ಮಾರುಕಟ್ಟೆ ಗೆಲ್ಲಲು ನಮ್ಮಲ್ಲಿರುವ ಅಸವಾಗಿದೆ. ಪಾನ್ ಇಂಡಿಯಾ ಪ್ಲಾೃನ್ ಮಾಡುತ್ತಿದ್ದೇವೆ ಎಂದರು. ಕಿಂಗ್ ಐಸ್‌ಕ್ರೀಂ ಮಾರುಕಟ್ಟೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಸ್ತರಣೆಗೊಳ್ಳುತ್ತಿದ್ದು, ಈ ಯಶಸ್ಸಿನ ಹಿಂದೆ ಅಜ್ಜ ವಿಜಯ ಸಂಕೇಶ್ವರ ಅವರ ನಿಖರವಾದ ಮುನ್ನೋಟ, ಮಾರ್ಗದರ್ಶನ, ದೊಡ್ಡ ಪ್ರಮಾಣದಲ್ಲಿ ಇರುವ ವಿತರಕರು, ಗ್ರಾಹಕರು ಹಾಗೂ ಸಂಸ್ಥೆ ಸಿಬ್ಬಂದಿ ವರ್ಗದ ದೊಡ್ಡ ಕೊಡುಗೆ ಇದೆ ಎಂದು ಹೇಳಿದರು. ಸ್ಪರ್ಧಾತ್ಮಕ ಯುಗದಲ್ಲಿ ವಿಜಯಕಾಂತ ಡೇರಿ ಆ್ಯಂಡ್ ಪ್ರೊಡಕ್ಟ್ಸ್ ಲಿಮಿಟೆಡ್‌ಗೆ ವಿತರಕರು, ಸಿಬ್ಬಂದಿ ಬೆನ್ನೆಲುಬಾಗಿ ನಿಂತಿದ್ದಾರೆ. ಅವರ ನಿರಂತರ ಶ್ರಮ, ಶ್ರದ್ಧೆಯಿಂದ ವಿಜಯಕಾಂತ ಡೇರಿ ಯಶಸ್ವಿಯಾಗಿ ಬೆಳೆದು ನಿಂತಿದೆ. ಅವರೆಲ್ಲ ನಮ್ಮ ಪರಿವಾರ ಎಂದು ವಿಜಯಕಾಂತ್ ಹೇಳಿದರು.

ತಂದೆಯ ಕನಸು

ವಿಜಯಕಾಂತ್ ಡೇರಿ ಬ್ರಾೃಂಡ್ ಮಾಡಬೇಕೆಂಬ ತಂದೆಯ ಕನಸು ನನಸು ಮಾಡಲು ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತಿದ್ದೇವೆ. ಅಪ್ಪ ನಿಧನರಾದ ಒಂದು ವಾರದಲ್ಲಿ ದುಃಖದ ನಡುವೆಯೇ ಅಮ್ಮ ಕಂಪನಿಗೆ ಆಗಮಿಸಿದರು. ಕಂಪನಿ ಮುನ್ನಡೆಸಲು ಮಾರ್ಗದರ್ಶನ ನೀಡಿದರು. ಈ ಸಂಸ್ಥೆಯನ್ನು ಹೇಗೆ ಮುಂದುವರಿಸಬೇಕು ಎಂದು ವಿಜಯ ಸಂಕೇಶ್ವರ ಅವರು ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದು ಸಂಸ್ಥೆಯ ಉಪಾಧ್ಯಕ್ಷೆ ನಿವೇದಿತಾ ಸಿದ್ನಾಳ ಸ್ಮರಿಸಿದರು.

ಪ್ರತಿದಿನ ಸುಮಾರು 50 ಸಾವಿರ ರೈತರು 1.4 ಲಕ್ಷ ಲೀಟರ್ ಹಾಲು ಪೂರೈಸುತ್ತಾರೆ. ಬಂದಿರುವ ಹಾಲು ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡುತ್ತದೆ. ಸಂಗ್ರಹವಾದ ಹಾಲಿನಲ್ಲಿ ಶೇ.1ರಷ್ಟು ದೋಷ ಕಂಡುಬಂದರೂ, ಅದನ್ನು ತಿರಸ್ಕರಿಸುತ್ತೇವೆ. ಮಂಗಳೂರು ಮತ್ತು ಇಡೀ ಕರಾವಳಿ ಭಾಗದ ವಿತರಕರು, ಮಾರುಕಟ್ಟೆ ವಿಭಾಗದ ನೌಕರರ ತಂಡದ ಮೇಲೆ ಪೂರ್ಣ ವಿಶ್ವಾಸವಿದ್ದು, ನಮ್ಮ ಬ್ರಾೃಂಡ್ ಅನ್ನು ಈ ಭಾಗದಲ್ಲಿಯೂ ಮೊದಲನೇ ಸ್ಥಾನಕ್ಕೆ ತರುವಲ್ಲಿ ನಿಮ್ಮ ಮಹತ್ತರ ಪಾತ್ರವಿರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಗಣೇಶ್ ಮಾತನಾಡಿ, ಕಳೆದ 19 ವರ್ಷಗಳಿಂದ ಹೈನೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ವಿಜಯಕಾಂತ ಡೇರಿ ಆ್ಯಂಡ್ ಫುಡ್ ಪ್ರೊಡಕ್ಟ್ಸ್ ಲಿಮಿಟೆಡ್‌ನಲ್ಲಿ ನೇರ ಮತ್ತು ಪರೋಕ್ಷವಾಗಿ ಲಕ್ಷಾಂತರ ಜನರು ಉದ್ಯೋಗ ಪಡೆದುಕೊಂಡಿದ್ದಾರೆ. ನೂರಾರು ಹಳ್ಳಿಗಳಲ್ಲಿ ವಿಜಯಕಾಂತ ಡೇರಿ ಮೇಲೆ ಸಾವಿರಾರು ಕುಟುಂಬಗಳು ಅವಲಂಬಿತವಾಗಿವೆ. ಬೆಳಗಾವಿ, ಧಾರವಾಡ, ಬಾಗಲಕೋಟೆ ಜಿಲ್ಲೆಗಳಿಂದ ಹಾಲು ಸಂಗ್ರಹವಾಗುತ್ತದೆ. 300 ಮಾದರಿಯ ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಹೈನುಗಾರಿಕೆ ಕ್ಷೇತ್ರದಲ್ಲಿ ಹೊಸ ಸಾಧನೆ ಮಾಡಿದೆ ಎಂದರು.

ವಿಜಯಕಾಂತ ಡೇರಿ ಮತ್ತು ಆಹಾರ ಉತ್ಪನ್ನ ಲಿಮಿಟೆಡ್ ಎಂಡಿ ದೀಪಾ ಸಿದ್ನಾಳ, ಉಪಾಧ್ಯಕ್ಷರಾದ ವಿಜಯಕಾಂತ ಸಿದ್ನಾಳ, ನಿವೇದಿತಾ ಸಿದ್ನಾಳ, ಲಲಿತಾ ವಿಜಯ ಸಂಕೇಶ್ವರ ಇದ್ದರು.

ಭಾಗವಹಿಸಿದ ಐಸ್‌ಕ್ರೀಂ ವಿತರಕರು, ಮಳಿಗೆಗಳ ಮಾಲೀಕರನ್ನು ಡಾ.ವಿಜಯ ಸಂಕೇಶ್ವರ ಅವರು ಗೌರವಿಸಿದರು. ಸಂಸ್ಥೆಯ ಡಿಜಿಟಲ್ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಯಿತು. ಹೆರಾ ಪಿಂಟೋ ಕಾರ್ಯಕ್ರಮ ನಿರ್ವಹಿಸಿದರು.

ತರಹೇವಾರಿ ಉತ್ಪನ್ನಗಳು

ಐಸ್‌ಕ್ರೀಂ ಸ್ಟಿಕ್, ಕೋನ್, ಕಪ್ ಐಸ್‌ಕ್ರೀಂ, ಪ್ರೀಮಿಯಂ ಐಸ್‌ಕ್ರೀಂ ಪ್ಯಾಕ್, ನಾವೆಲ್ಟಿ, ಟ್ವಿಸ್ಟ್ ಐಸ್‌ಕ್ರೀಂ, ಪ್ರೀಮಿಯಂ ಐಸ್‌ಕ್ರೀಂ ಟಬ್, ಸಿಪ್‌ಅಪ್, ್ಯಾಮಿಲಿ ಪ್ಯಾಕ್, ಬಲ್ಕ್ ಪ್ಯಾಕ್ ಟೇಕ್ ಅವೇ ಪ್ಯಾಕ್, ಪ್ರೀಮಿಯಂ ಪಾರ್ಲರ್ ಬಲ್ಕ್ ಪ್ಯಾಕ್, ಕ್ಯಾಟರಿಂಗ್ ಪ್ಯಾಕ್ ಹೀಗೆ ತರಹೇವೇರಿ ಸ್ವಾದ ಹಾಗೂ ರೂಪಗಳಲ್ಲಿ ಕಿಂಗ್ ಐಸ್‌ಕ್ರಿಂ ಉತ್ಪನ್ನಗಳು ಲಭ್ಯವಿದೆ.

365 ದಿನ 24X 7 ಮಾಡೋ ಉದ್ಯಮ

ಸುಮಾರು 19 ವರ್ಷದ ಹಿಂದೆ ಶಿವಕಾಂತ ಸಿದ್ನಾಳ್ ಹಾಗೂ ಮಗಳು ದೀಪಾ ಸಿದ್ನಾಳ್ ಯಾವುದಾದರೂ ಹೊಸ ಉದ್ಯಮ ಆರಂಭಿಸುವ ಬಗ್ಗೆ ಸಲಹೆ ಕೇಳಿದ್ದರು. ವರ್ಷದ 365 ದಿನ 24X 7 ತಾಸು ಕೆಲಸ ಮಾಡಲು ಸಿದ್ಧರಿದ್ದರೆ ಮಾಡಬಹುದು ಎಂದು ಹೇಳಿದ್ದೆ. ಉದ್ಯಮಕ್ಕೆ ಅಂತಹ ಬದ್ಧತೆ ಬೇಕು ಎಂದು ಡಾ.ವಿಜಯ ಸಂಕೇಶ್ವರ ಅವರು ಸ್ಮರಿಸಿದರು.

25 ವರ್ಷ ಹಿಂದೆ ನನ್ನ ತಂದೆಯವರು ಸ್ವರ್ಗಸ್ಥರಾದ ದಿನ ನಮ್ಮ ಸಾರಿಗೆ ಉದ್ಯಮವನ್ನು ನಾನು ಒಂದು ದಿನ ಕೂಡ ಬಂದ್ ಮಾಡಿರಲಿಲ್ಲ. ಕೆಲವರು ಈ ಬಗ್ಗೆ ಟೀಕಿಸಿದರು. ಹಣದ ದುರಾಸೆ ಎಂದು ಹೇಳಿದವರೂ ಇದ್ದರು. ಆದರೆ ಒಂದು ಉದ್ಯಮವನ್ನು, ಅವುಗಳ ವ್ಯವಹಾರವನ್ನು ನಂಬಿಕೊಂಡವರು ಲಕ್ಷಾಂತರ ಮಂದಿ ಇರುತ್ತಾರೆ ಎನ್ನುವುದು ಉದ್ಯಮ ನಡೆಸುವವರಿಗೆ ಗೊತ್ತಿರಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net