ಹಗಲುಗನಸು ಕಾಣುತ್ತಿರುವ ವಿಪಕ್ಷಗಳು: ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವ್ಯಂಗ್ಯ

1
Published on

ಮಂಡ್ಯ: ಜೆಡಿಎಸ್ ಮತ್ತು ಬಿಜೆಪಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲದಂತೆ ಮಾಡುತ್ತೇವೆನ್ನುವ ಹಗಲುಗನಸು ಕಾಣುತ್ತಿದ್ದಾರೆ. ಆದರೆ ಇನ್ನು ಮುಂದೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ್ದೇ ಆಡಳಿತ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಆಯೋಜಿಸಿದ್ದ ‘ಗೃಹಜ್ಯೋತಿ’ ಯೋಜನೆಗೆ ಗ್ರಾಹಕರಿಗೆ ಶೂನ್ಯ ಮೊತ್ತದ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಕಿತ್ತು ಹಾಕಬೇಕೆಂದುಕೊಂಡಿದ್ದರೆ ಬಿಜೆಪಿ ಮತ್ತು ಜೆಡಿಎಸ್‌ಗೆ ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷದ ಗುರಿ ಅಭಿವೃದ್ಧಿ ಒಂದೇ. ಎಲ್ಲ ವರ್ಗದ ಜನರ ಪರ ನಿಲ್ಲುತ್ತೇವೆ. ಗ್ರಾಮ, ತಾಲೂಕು, ಜಿಲ್ಲೆಗಳನ್ನು ಅಭಿವೃದ್ಧಿ ಮಾಡಿಯೇ ತೀರುತ್ತೇವೆ. ವ್ಯಕ್ತಿ ಅಲ್ಲ, ಕಾಂಗ್ರೆಸ್ ಪಕ್ಷ ಎಂದು ಮತ ಹಾಕಬೇಕು. ಆ ರೀತಿ ಯೋಜನೆ ರೂಪಿಸುತ್ತೇವೆ ಎಂದರು ಹೇಳಿದರು.

ಐದು ಗ್ಯಾರಂಟಿ ಯೋಜನೆಗಳನ್ನು ನೀಡಿದರೆ ಕರ್ನಾಟಕ ದಿವಾಳಿಯಾಗುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದಲೂ ಬಿಜೆಪಿ ನಾಯಕರು ಸುಳ್ಳು ಹೇಳಿಕೆಗಳನ್ನು ಕೊಡಿಸಿದರು. ಕರ್ನಾಟಕದಲ್ಲಿರುವುದು ಕಾಂಗ್ರೆಸ್ ಸರ್ಕಾರ ಎಂದು ಪ್ರಧಾನಿಗಳು ಯೋಚನೆ ಮಾಡಬೇಕಾಗಿತ್ತು. ಆದರೆ, ಯೋಚನೆ ಮಾಡದೆ ಸಮಾರಂಭವೊಂದರಲ್ಲಿ ಹೇಳಿಕೆ ನೀಡಿದ್ದಾರೆ ಎಂದು ಛೇಡಿಸಿದ ಅವರು, ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಕಳೆದ ಎರಡೂವರೆ ತಿಂಗಳಿನಿಂದ ನೆಮ್ಮದಿಯಾಗಿ ನಿದ್ರೆ ಮಾಡುತ್ತಿಲ್ಲ, ಊಟ ಮಾಡುತ್ತಿಲ್ಲ. ನಾವು ಕೊಟ್ಟ ಭರವಸೆಗಳನ್ನು ಈಡೇರಿಸಿಲ್ಲ, ಜನರಿಗೆ ಕೊಟ್ಟ ಮಾತನ್ನು ತಪ್ಪಿದ್ದೇವೆ. ಇನ್ನು ಇವರು 5 ಗ್ಯಾರಂಟಿ ಯೋಜನೆಗಳನ್ನು ಮಾಡುವುದಿಲ್ಲ, ಇವರ ವಿರುದ್ಧ ಪ್ರತಿದಿನ ವಾಗ್ದಾಳಿ ನಡೆಸಬಹುದು ಎಂದುಕೊಂಡಿದ್ದರು. ಆದರೆ, ಅದು ಸಾಧ್ಯವಾಗಲಿಲ್ಲ. ಅದಕ್ಕಾಗಿ ಯಾವುದೆ ವಿಚಾರಗಳನ್ನು ತೆಗೆದು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಣೆ ಮಾಡಿದಂತೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರು ಅಧಿಕಾರಕ್ಕೆ ಬಂದ ಕೂಡಲೇ ಮೊದಲ ಕ್ಯಾಬಿನೆಟ್ ಸಭೆಯಲ್ಲೇ 5 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿದರು. ಇದಕ್ಕಾಗಿ 35 ಸಾವಿರ ಕೋಟಿ ರೂ ಒದಗಿಸುವ ಮೂಲಕ ಒಂದೊಂದು ಯೋಜನೆಗಳನ್ನು ಜಾರಿಗೆ ತಂದರು. ಅಂತೆಯೇ ಯುವನಿಧಿ ಯೋಜನೆಯನ್ನು ಡಿಸೆಂಬರ್ ತಿಂಗಳಲ್ಲಿ ಜಾರಿಗೆ ತರಲಾಗುವುದು. ಜನರು ಹೇಳಿದಂತೆ 5 ಗ್ಯಾರಂಟಿ ಯೋಜನೆಗಳನ್ನು ಪ್ರಪಂಚದಲ್ಲಿ ಜಾರಿಗೆ ತಂದಿರುವ ಸರ್ಕಾರ ಎಂದರೆ ಅದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಮಾತ್ರ. ಇದನ್ನು ಸಹಿಸದ ವಿಪಕ್ಷದ ನಾಯಕರು ಇಲ್ಲಸಲ್ಲದ ಆರೋಪ ಮಾಡುವ ಮೂಲಕ ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದು ಹರಿಹಾಯ್ದರು.

ಗ್ಯಾರಂಟಿ ಯೋಜನೆಗಳಲ್ಲೊಂದಾದ ‘ಅನ್ನಭಾಗ್ಯ’ಕ್ಕೆ ಹಣ ನೀಡುತ್ತೇವೆ, ಅಕ್ಕಿ ಕೊಡಿ ಎಂದರೂ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ರಾಜಕೀಯ ಮಾಡಿ ಬಡವರ ಜತೆ ಚೆಲ್ಲಾಟವಾಡಿದರು. ಇವರು ಅಕ್ಕಿ ಕೊಡಲಿಲ್ಲ ಎಂದು ಅಕ್ಕಿ ಬದಲಿಗೆ ಹಣ ನೀಡಿದ್ದೇವೆ. ಇದರಿಂದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ತಲೆಕೆಟ್ಟು ಹೋಗಿದೆ ಎಂದು ಹೇಳಿದರು.

ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಮಾತನಾಡಿ, ಕಾಂಗ್ರೆಸ್ ಸರ್ಕಾರದ ಉತ್ತಮ ಆಡಳಿತ ಸಹಿಸದೆ ಅವರ ಕಾಲದಲ್ಲಿ ಒಂದೇ ಒಂದು ಯೋಜನೆ ಕೊಡದಿದ್ದರೂ ಜನರಲ್ಲಿ ತಪ್ಪು ಭಾವನೆ ಮೂಡಿಸುವ ಮೂಲಕ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿಕೆ ವಾಗ್ದಾಳಿ ನಡೆಸಿದರು.

ನಮಗೆ ಅಧಿಕಾರ ಮುಖ್ಯವಲ್ಲ, ಕೆಲಸ ಮತ್ತು ಜನರ ಸೇವೆ ಮುಖ್ಯ. ಜನರ ಸಮಸ್ಯೆ ಅರಿತು ಕೆಲಸ ಮಾಡುತ್ತಿದ್ದೇವೆ. ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹಾಗೂ ಎಲ್ಲ ಶಾಸಕರು ಒಗ್ಗಟ್ಟಾಗಿ ಜಿಲ್ಲೆಯ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಇನ್ನು ಕೆಲವೇ ದಿನಗಳಲ್ಲಿ ಪ್ರಕಟ ಮಾಡುತ್ತೇವೆ. 5 ಗ್ಯಾರಂಟಿ ಯೋಜನೆಗಳಿಂದ ಕಂಗೆಟ್ಟಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರಿಗೆ ಕೇವಲ ಟೀಕೆ ಮಾಡುವುದೇ ಕೆಲಸವಾಗಿದೆ. ನಾವು ಬೇಸರ ಮಾಡಿಕೊಳ್ಳಲ್ಲ. ಟೀಕೆ ಮಾಡುವವರಿಗೆ ಇಂತಹ ಯೋಜನೆಗಳನ್ನು ಜನರಿಗೆ ಕೊಡಲು ಏಕೆ ಸಾಧ್ಯವಾಗಲಿಲ್ಲ ಎಂದು ಪ್ರಶ್ನಿಸಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ರವಿಕುಮಾರ್ ಗಣಿಗ ಮಾತನಾಡಿ, ಜಿಲ್ಲೆಯ ಅಭಿವೃದ್ಧಿಗೆ ಕೇವಲ ಎರಡೂವರೆ ತಿಂಗಳಲ್ಲಿ 750 ಕೋಟಿ ರೂ ಅನುದಾನ ತಂದಿದ್ದೇವೆ. ಮಂಡ್ಯ ತಾಲ್ಲೂಕಿನ ಹಂಪಾಪುರ ಬಳಿ 400 ಕೆವಿ ವಿದ್ಯುತ್ ಸಬ್‌ಸ್ಟೇಷನ್ ಸ್ಥಾಪಿಸಲು 600 ಕೋಟಿ ರೂ, ಮೈಶುಗರ್ ಪುನಶ್ಚೇತನಕ್ಕೆ 50 ಕೋಟಿ ರೂ, ಮಂಡ್ಯ ನಗರದ ಅಭಿವೃದ್ಧಿಗೆ 25 ಕೋಟಿ ರೂ ಬಂದಿದೆ. ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆಯುತ್ತಿದೆ. ಜಿಲ್ಲೆಯಲ್ಲಿ ‘ಗೃಹಜ್ಯೋತಿ’ ಯೋಜನೆಗೆ ಶೇ.85ರಷ್ಟು ಜನ ನೋಂದಣಿಯಾಗಿದ್ದಾರೆ. ಇದೇ ತಿಂಗಳ 17ರಿಂದ ಮಹಿಳೆಯರಿಗೆ ಗೃಹಲಕ್ಷ್ಮೀ ಯೋಜನೆಯಡಿ 2 ಸಾವಿರ ರೂ ಅವರ ಖಾತೆಗೆ ಬರಲಿದೆ ಎಂದರು.

ಜಿಲ್ಲಾಧಿಕಾರಿ ಡಾ. ಕುಮಾರ, ಜಿಪಂ ಸಿಇಒ ಶೇಖ್ ತನ್ವೀರ್ ಆಸಿಫ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್, ಸೆಸ್ಕ್ ಅಧೀಕ್ಷಕ ಇಂಜಿನಿಯರ್ ಬಿ.ಕೃಷ್ಣಮೂರ್ತಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಗಂಗಾಧರ, ಜಿಪಂ ಮಾಜಿ ಸದಸ್ಯ ಬಿ.ಎಲ್.ದೇವರಾಜು, ಕುರುಬರ ಸಂಘದ ಅಧ್ಯಕ್ಷ ಸುರೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net