

ಪಡುಬಿದ್ರಿ: ಬೆಳಪು ಗ್ರಾಮದಲ್ಲಿ 25 ವರ್ಷಗಳಿಂದ ಸತತ ವನಮಹೋತ್ಸವ ಆಯೋಜಿಸಲಾಗುತ್ತಿದ್ದು, ಮನೆಗೊಂದು ಮಗು, ಮಗುವಿಗೊಂದು ಗಿಡ ಯೋಜನೆ, ಪಂಚಾಯಿತಿ ವ್ಯಾಪ್ತಿಯ ಕಾಡುಗಳಲ್ಲಿ ಲಕ್ಷ ಸಸಿ ನೆಡುವುದು, ಚಿಣ್ಣರ ವನ ರಚನೆ ಸಹಿತ ಹಲವು ಯೋಜನೆಗಳ ಮೂಲಕ ಗ್ರಾಮವನ್ನು ಹಸಿರಾಗಿಸುವ ಸಂಕಲ್ಪ ಹೊಂದಲಾಗಿದೆ ಎಂದು ಬೆಳಪು ಗ್ರಾಪಂ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಹೇಳಿದರು.
ಅರಣ್ಯ ಇಲಾಖೆ ಸಹಭಾಗಿತ್ವದಲ್ಲಿ ಬೆಳಪು ಗ್ರಾಮದ ರಸ್ತೆ ಬದಿ ಹಾಗೂ ಕೈಗಾರಿಕಾ ಪಾರ್ಕ್‌ನಲ್ಲಿ ಹಸಿರುವನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಬೆಳಪು ಗ್ರಾಮದಲ್ಲಿ ಅನುಷ್ಠಾನಗೊಳ್ಳುತ್ತಿರುವ ಅತ್ಯಾಧುನಿಕ ಸಂಶೋಧನಾ ಕೇಂದ್ರ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು, ಕೈಗಾರಿಕಾ ಪಾರ್ಕ್, ಹಿಂದು ರುದ್ರಭೂಮಿ ಹಾಗೂ ದಫನಭೂಮಿಯಲ್ಲಿ ಗಿಡ ನೆಡುವ ಯೋಜನೆಗೆ ಚಾಲನೆ ನೀಡಲಾಗುವುದು ಎಂದರು.
ಕಾಪು ಉಪ ವಲಯ ಅರಣ್ಯಾಧಿಕಾರಿ ಜೀವನ್‌ದಾಸ್ ಶೆಟ್ಟಿ, ಗಸ್ತು ಅರಣ್ಯಪಾಲಕರಾದ ಮಂಜುನಾಥ, ಅಖಿಲೇಶ್, ಗ್ರಾಪಂ ಸದಸ್ಯ ಸುಲೇಮಾನ್, ಪ್ರಮುಖರಾದ ಸುದರ್ಶನ್ ಪೂಜಾರಿ, ಗಿರೀಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.